ಬೆಂಗಳೂರು, ಫೆ.27 (DaijiworldNews/PY) : ಕೋಲಾರ ಹಾಗೂ ಬೆಂಗಳೂರು ಸೇರಿದಂತೆ ಕರ್ನಾಟಕ ಹಾಗೂ ತಮಿಳುನಾಡಿನ 25 ಕಡೆ ಉಗ್ರರ ದಾಳಿ ಬೆನ್ನಲ್ಲೇ ಅಲ್ ಹಿಂದ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಐಎಸ್ ಶಂಕಿತ ಉಗ್ರ ಫಝಿ ಅಲಿಯಾಸ್ ಸೈಯದ್ ಫಝಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ದೇಶದ ವಿವಿಧೆಡೆ ಸಕ್ರಿಯವಾಗಿದ್ದ ಮೆಹಬೂಬ್ ಪಾಷಾ ಮತ್ತು ಖ್ವಾಜಾ ಮೊಹಿನುದ್ದೀನ್ ನೇತೃತ್ವದ ತಂಡದಲ್ಲಿ ಆರೋಪಿಯು ಗುರುತಿಸಿಕೊಂಡಿದ್ದ. ಎನ್ಐಎ ಅಧಿಕಾರಿಗಳು ಕಳೆದ ಒಂದು ವಾರದಿಂದ ಫಝಿ ಹಿಂದೆ ಬಿದ್ದಿದ್ದರು ಎಂದು ಮೂಲಗಳು ತಿಳಿಸಿವೆ.
ಜ.10ರಂದು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಕೆಲವು ಆರೋಪಿಗಳ ಜೊತೆ ಫಝಿಯೂ ಪರಾರಿ ಆಗಿರಬಹುದೆಂದು ಅಂದಾಜಿಸಲಾಗಿತ್ತು. ಕಾರ್ಯಕ್ರಮ ಸಂಘಟಿಸುವ ಸಂಸ್ಥೆ ನಡೆಸುತ್ತಿದ್ದ ಈತ ನಂತರ ಗ್ಯಾರೇಜ್ನಲ್ಲೂ ಕೆಲಸ ಮಾಡುತ್ತಿದ್ದ. ಈತ ಜ.19ರ ನಂತರ ತಲೆ ಮರೆಸಿಕೊಂಡಿದ್ದ. ಪಾಷಾನ ಮಾಹಿತಿ ಆಧರಿಸಿ ಎನ್ಐಎ ಅಧಿಕಾರಿಗಳು ಈತನನ್ನು ಬಂಧಿಸಿದರು.
ಫಝಿ ಮಂಗಳವಾರ ರಾತ್ರಿ ಟ್ಯಾನರಿ ಒಳಗೆ ಹೊಕ್ಕು ಅವಿತಿದ್ದ. ಬಳಿಕ ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ಟ್ಯಾನರಿಯನ್ನು ಸುತ್ತುವರಿಯಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಂಡು ಓಡಿದ ಆರೋಪಿಯನ್ನು ಒಂದು ಕಿ.ಮೀ. ಹಿಂಬಾಲಿಸಿ ಹಿಡಿಯಲಾಯಿತು.
ಫಝಿ ಹಿಂದೂ ಮುಖಂಡರನ್ನು ಕೊಲ್ಲುವ ಮೂಲಕ ಅಲ್ ಹಿಂದ್ ಚಟುವಟಿಕೆಗಳನ್ನು ತೀವ್ರಗೊಳಿಸುವ ಸಂಬಂಧ ಮೆಹಬೂಬ್ ಪಾಷಾನ ಬೆಂಗಳೂರು ಗುರಪ್ಪನಪಾಳ್ಯದ ಮನೆಯಲ್ಲಿ ನಡೆದಿದ್ದ ಹಲವು ಸಭೆಗಳಲ್ಲಿ ಭಾಗವಹಿಸಿದ್ದ. ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಸಂಗ್ರಹಿಸುವ ಸಂಚಿನಲ್ಲೂ ಆರೋಪಿ ಭಾಗಿಯಾಗಿದ್ದ ಎನ್ನಲಾಗಿದೆ.