ನವದೆಹಲಿ, ಫೆ.27 (DaijiworldNews/PY) : ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಹೆಡ್ ಕಾನ್ಸ್ ಟೇಬಲ್ ರತನ್ ಲಾಲ್ ಕುಟುಂಬಕ್ಕೆ ದೆಹಲಿ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ.
ಈ ವಿಚಾರವಾಗಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಸರ್ಕಾರವು ದೆಹಲಿ ಪೊಲೀಸರ ರಕ್ಷಣೆಗೆ ಬದ್ಧವಾಗಿದೆ ಎಂದರು.
ಹಿಂಸಾಚಾರದಲ್ಲಿ ಮೃತಪಟ್ಟ ಹೆಡ್ ಕಾನ್ಸ್ ಟೇಬಲ್ ರತನ್ ಲಾಲ್ ಕುಟುಂಬಕ್ಕೆ 1 ಕೋಟಿ ಪರಿಹಾರ ಹಾಗೂ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಗೋಕುಲ್ಪುರ್ ಪ್ರದೇಶದಲ್ಲಿ ಫೆ.24ರಂದು ನಡೆದ ಘರ್ಷಣೆಯಲ್ಲಿ ಹೆಡ್ಕಾನ್ಸ್ ಟೇಬಲ್ ರತನ್ ಲಾಲ್ ಮೃತಪಟ್ಟಿದ್ದರು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈಶಾನ್ಯ ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು. ಕಳೆದ ನಾಲ್ಕು ದಿನಗಳಿಂದ ಹಿಂಸಾಚಾರಕ್ಕೆ ನಲುಗಿದ್ದ ದೆಹಲಿಯ ಪರಿಸ್ಥಿತಿ ಗುರುವಾರ ಕೊಂಚ ಹತೋಟಿಗೆ ಬಂದಿದೆ. ಇದುವರೆಗೂ ನಡೆದ ಹಿಂಸಾಚಾರದಲ್ಲಿ 27 ಮಂದಿ ಪ್ರಾಣ ಬಿಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.