ನವದೆಹಲಿ, ಫೆ.27 (DaijiworldNews/PY) : ದೆಹಲಿ ಹಿಂಸಾಚಾರ ಸಂಬಂಧಿಸಿದ ಪ್ರಕರಣ ವಿಚಾರಣೆ ನಡೆಸುತ್ತಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಎಸ್. ಮುರಳೀಧರ್ ಅವರು ಫೆ.26 ಬುಧವಾರದಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ಗೆ ವರ್ಗಾವಣೆಗೊಂಡಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಗಲಭೆಗಳು ಸಂಭವಿಸಿ ಹಲವು ದಿಗಳ ಮೊದಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಇದನ್ನು ಶಿಫಾರಸು ಮಾಡಿದ್ದರಿಂದ ಇದು ವಾಡಿಕೆಯ ವರ್ಗಾವಣೆಯಾಗಿದೆ.
ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೊಂದಿಗೆ ಸಮಾಲೋಚಿಸಿದ ಬಳಿಕ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ದೆಹಲಿ ಹೈಕೋರ್ಟ್ನ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಾಧೀಶರನ್ನಾಗಿ ವರ್ಗಾಯಿಸಿದ್ದಾರೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿ ಮುರಳೀಧರ್ ಅವರನ್ನು ಫೆ.12 ರಂದು ನಡೆದ ಸಭೆಯಲ್ಲಿ ದೆಹಲಿ ಹೈಕೋರ್ಟ್ನಿಂದ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ಗೆ ವರ್ಗಾಯಿಸಲು ಉನ್ನತ ನ್ಯಾಯಾಲಯದ ಕೊಲೆಜಿಯಂ ಶಿಫಾರಸು ಮಾಡಿತ್ತು. ದೆಹಲಿ ಹೈಕೋರ್ಟಿನ ಮೂರನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಹಾಗೂ ದಿಟ್ಟ ತೀರ್ಪುಗಳನ್ನು ನೀಡುವವರೆಂದು ಜಸ್ಟಿಸ್ ಎಸ್ . ಮುರಳೀಧರ್ ಖ್ಯಾತರಾಗಿದ್ದರು.