ನವದೆಹಲಿ, ಫೆ.27 (DaijiworldNews/PY) : ಮಾರಣಾಂತಿಕ ಕೊರೋನಾ ವೈರಸ್ನಿಂದಾಗಿ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಸಿಲುಕಿಕೊಂಡಿದ್ದ 119 ಭಾರತೀಯರು ಹಾಗೂ 5 ಮಂದಿ ವಿದೇಶಿಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಗುರುವಾರ ಮುಂಜಾನೆ ದೆಹಲಿಗೆ ತಲುಪಿದೆ.
3,711 ಮಂದಿ ಟೋಕಿಯೋದ ಹಡಗಿನಲ್ಲಿ ಪ್ರಯಾಣಿಸುತ್ತಿದ್ದು ಇದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ಇರುವುದು ಖಚಿತ ಪಟ್ಟಿತ್ತು. 132 ಭಾರತೀಯರೂ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಜಪಾನ್ ಸರ್ಕಾರ ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ಅಲ್ಲಿನ ಆಸ್ಪತ್ರೆಗಳಿಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದೆ. ಉಳಿದಂತಹ ಎಲ್ಲಾ ಪ್ರಯಾಣಿಕರನ್ನು ಅವರವರ ಸ್ವದೇಶಕ್ಕೆ ಕಳುಹಿಸಲಾಗಿದೆ.
119 ಭಾರತೀಯರಿಗೆ ಈ ಸಮಯದಲ್ಲಿ ಹಡಗಿನಿಂದ ಬರಲು ಸಾಧ್ಯವಾಗಿರಲಿಲ್ಲ. ತಕ್ಷಣವೇ ಕೇಂದ್ರ ಸರ್ಕಾರ ಜಪಾನ್ನಲ್ಲಿದ್ದ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ವಿಮಾನವನ್ನು ಜಪಾನ್ಗೆ ಕಳುಹಿಸಲು ವ್ಯವಸ್ಥೆ ಮಾಡಿತ್ತು.
ಈ ಸಂದರ್ಭ ಭಾರತೀಯರ ಜೊತೆ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಹಾಗೂ ಪೆರುವಿನ ಐದು ಮಂದಿ ಸುರಕ್ಷಿತವಾಗಿ ಹೊರಬರಲು ಯಾವುದೇ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದರು. ಜಪಾನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಈ ಐದು ಮಂದಿಯನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಕೊರೋನಾ ವೈರಸ್ 16 ಮಂದಿ ಭಾರತೀಯರಲ್ಲಿರುವುದು ಖಚಿತಪಟ್ಟಿದ್ದು, ಅವರಿಗೆ ಜಪಾನ್ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಗುಣಮುಖರಾದ ಬಳಿಕ ಭಾರತಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಜಪಾನ್ ಸರ್ಕಾರ ತಿಳಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜಪಾನ್ ಸರ್ಕಾರದ ಸಹಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.