ಬೆಂಗಳೂರು, ಫೆ 27 (Daijiworld News/MB) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 77 ನೇ ಜನ್ಮ ದಿನ ಗುರುವಾರವಾಗಿದ್ದು ಅವರ ಅಭಿಮಾನಿಗಳು ನಗರದ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿದ್ದಾರೆ.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಸಾಮಾಜಿಕ ಮತ್ತು ರಾಜಕೀಯ ಹೋರಾಟ ಜೀವನದ ಕುರಿತ ಅಭಿನಂದನಾ ಗ್ರಂಥ ಬಿಡುಗಡೆಯಾಗಲಿದ್ದು ಈ ಕಾರ್ಯಕ್ರಮವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ.
ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಕಾಫಿ ಟೇಬಲ್ ಪುಸ್ತಕವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರೆ, ಸಾಕ್ಷ್ಯಚಿತ್ರವನ್ನು ಎಚ್.ಡಿ.ಕುಮಾರಸ್ವಾಮಿ ಅನಾವರಣ ಮಾಡುವರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಉಪಸ್ಥಿತರಿರುವರು. ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಲ್ಹಾದ ಜೋಷಿ, ಸುರೇಶ್ ಅಂಗಡಿ ಹಾಜರಿರಲಿದ್ದಾರೆ. ಡಾ.ಸಿದ್ದಲಿಂಗಯ್ಯ ಅಭಿನಂದನಾ ಮಾತುಗಳನ್ನು ಆಡುವರು. ಸಂಜೆ 4ರಿಂದ 5ರವರೆಗೆ ಪಂಡಿತ್ ವೆಂಕಟೇಶ್ಕುಮಾರ್ ತಂಡದಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದ್ದು, ಬಳಿಕ ಸಭಾ ಕಾರ್ಯಕ್ರಮ ಆರಂಭವಾಗಲಿದೆ.
ಈ ಕುರಿತಾಗಿ ಬುಧವಾರ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿರೂರಪ್ಪನವರು, "ನಾಡಿನ ಸಮಸ್ತ ಜನತೆ, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಬಂಧುಗಳಲ್ಲಿ ವಿನಯಪೂರ್ವಕ ಮನವಿ. ಎಲ್ಲರ ಹಾರೈಕೆ, ಹರಕೆ ಹಾಗೂ ಆಶಿರ್ವಾದಗಳಿಂದಲೇ ನಿಮ್ಮಲ್ಲರ ಸೇವೆ ಮಾಡುವ ಸ್ಥಾನದ ಸೌಭಾಗ್ಯವನ್ನು ಪಡೆದಿದ್ದೇನೆ. ನನ್ನ ಜೀವನದ ಎಲ್ಲ ಘಟ್ಟಗಳಲ್ಲೂ ನಿಮ್ಮೆಲ್ಲರ ಪ್ರೀತಿಯ ಮಹಾಪೂರದಲ್ಲಿ ಮಿಂದು ಪುನೀತನಾಗಿದ್ದೇನೆ, ವಿನೀತನಾಗಿದ್ದೇನೆ. ಹಾಗಾಗಿ, ನಾಳಿನ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಫಲಪುಷ್ಪ, ಪೇಟ, ಶಾಲು, ಹಾರ, ತುರಾಯಿ, ಸಿಹಿತಿಂಡಿ ಹಾಗೂ ನೆನಪಿನ ಕಾಣಿಕೆಗಳನ್ನು ತರಬಾರದೆಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.