ನವದೆಹಲಿ, ಫೆ.27 (DaijiworldNews/PY) : ನವದೆಹಲಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ 27 ಮಂದಿಯಲ್ಲಿ 11 ದಿನಗಳ ಹಿಂದೆ ವಿವಾಹವಾಗಿದ್ದ ಇಲೆಕ್ಟ್ರೀಶಿಯನ್ ಓರ್ವರು ಕೂಡ ಸೇರಿದ್ದಾರೆ.
ಮುಸ್ತಫಾಬಾದ್ನಲ್ಲಿ ವಾಸಿಸುತ್ತಿರುವ ಅಶ್ಫಾಕ್ ಹುಸೈನ್ (22) ಇಲೆಕ್ಟ್ರಾನಿಕ್ಸ್ ಉಪಕರಣ ದುರಸ್ಥಿಗೆಂದು ತೆರಳಿ ಹಿಂದಿರುಗುವ ವೇಳೆ ಗುಂಡು ತಾಗಿ ಮೃತಪಟ್ಟಿದ್ದಾರೆ ಎಂದು ಅವರ ಮಾವ ಶರೀಫುಲ್ ಹುಸೈನ್ ತಿಳಿಸಿದ್ದಾರೆ.
ಸಂಜೆ 5.30ಕ್ಕೆ ಮುಸ್ತಾಫಾಬಾದ್ನಲ್ಲಿ ಬ್ರಿಜ್ಪುರಿಯಲ್ಲಿರುವ ಸೇತುವೆಯಲ್ಲಿ ದೆಹಲಿ ಪೊಲೀಸರು ಅಶ್ಫಾಕ್ ಹುಸೈನ್ ಅವರ ಮೇಲೆ ಮೂರು ಗುಂಡುಗಳನ್ನು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಅಶ್ಫಾಕ್ ಹುಸೈನ್ ಅವರಿಗೆ ಪೊಲೀಸರು ಹಾರಿಸಿದ ಗುಂಡುತಾಗಿ ಗಂಭೀರ ಗಾಯಗೊಂಡಿದ್ದರು, ಬಳಿಕ ಅವರನ್ನು ಸ್ಥಳಿಯರು ಮುಸ್ತಾಫಾಬಾದ್ನಲ್ಲಿರುವ ಆಸ್ಪತ್ರಗೆ ದಾಖಲಿಸಿದ್ಧಾರೆ. ಅಶ್ಫಾಕ್ ಹುಸೈನ್ ಅವರನ್ನು ಗುರುತು ಹಿಡಿದ ನೆರೆಯವರು ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಅಶ್ಫಾಕ್ ಹುಸೈನ್ ಅವರ ಮಾವ ಶರೀಫುಲ್ ಹುಸೈನ್ ಅವರು ಆಸ್ಪತ್ರೆಗೆ ಬರುವ ಮುನ್ನವೇ ಅಶ್ಫಾಕ್ ಹುಸೈನ್ ಅವರು ಮೃತಪಟ್ಟಿದ್ದರು.
ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶ್ಫಾಕ್ ಹುಸೈನ್ ಅವರ ಕುಟುಂಬವು ಕಾನೂನು ಕ್ರಮ ತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಶರೀಫುಲ್ ಹುಸೈನ್ ತಿಳಿಸಿದ್ದಾರೆ.