ಬಿಹಾರ, ಫೆ 27 (Daijiworld News/MB) : 2014ರಲ್ಲಿ ಮೋದಿ ಗೆಲುವಿಗಾಗಿ ಕೆಲಸ ಮಾಡಿ ಈಗ ಹೊರಬಂದಿರುವ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ವಿರುದ್ಧ ಕೃತಿ ಚೌರ್ಯ ಆರೋಪದಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಪೊಲೀಸ್ ಠಾಣೆಗೆ ಶಾಶ್ವತ್ ಗೌತಮ್ ಎಂಬುವವರು ದೂರು ನೀಡಿ, ನನ್ನ 'ಬಿಹಾರ್ ಕಿ ಬಾತ್' ಕಾರ್ಯಕ್ರಮವನ್ನು ಪ್ರಶಾಂತ್ ಯಥಾವತ್ತಾಗಿ ಕಾಪಿ ಮಾಡಿ 'ಬಾತ್ ಕಿ ಬಿಹಾರ್' ಎಂದು ತಿರುಚಿದ್ದಾರೆ ಎಂದು ದೂರಿದ್ದಾರೆ.
ಪ್ರಶಾಂತ್ ಅವರು ಬಿಜೆಪಿಯಿಂದ ಹೊರಬಂದ ಬಳಿಕ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ) ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆ ನಂತರ ಮುಖ್ಯಮಂತ್ರಿ ನಿತೀಶ್ ಅವರನ್ನು ನೇರವಾಗಿ ಟೀಕೆ ಮಾಡುತ್ತಿದ್ದ ಅವರು ಆ ಪಕ್ಷದಿಂದಲೂ ಹೊರಗಿಡಲಾಯಿತು.
ಆ ಬಳಿಕ ಬಿಹಾರವನ್ನು 10 -15 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯಗಳ ಸ್ಥಾನದಲ್ಲಿ ನಿಲ್ಲಿಸುವುದೇ ನನ್ನ ಮುಖ್ಯ ಗುರಿಯಾಗಿದ್ದು ಈ ಗುರಿ ಪೂರ್ಣಗೊಳಿಸಲು ಯುವಕರು, ವಿದ್ಯಾವಂತ ಯುವಕರು ಜೊತೆಯಾಗಬೇಕೆಂದು 'ಬಾತ್ ಬಿಹಾರ್ ಕಿ' ಎಂಬ ಕಾರ್ಯಕ್ರಮದ ಮೂಲಕ ಪ್ರಚಾರ ಮಾಡಿದ್ದರು.
ಈ ಕುರಿತಾಗಿ ಮಾತನಾಡಿದ ಪ್ರಶಾಂತ್ ವಿರುದ್ಧವಾಗಿ ದೂರು ನೀಡಿರುವ ಶಾಶ್ವತ್ ಗೌತಮ್ ಎಂಬವರು, "ಒಸಾಮ ಎಂಬಾತ ನನ್ನ ಸ್ನೇಹಿತನಾಗಿದ್ದ, ಕೆಲ ವರ್ಷಗಳ ಹಿಂದೆ ಆತ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆ ಸಂದರ್ಭದಲ್ಲಿ ಆತನಿಗೆ ನಾನೇ ಈ ಕಾರ್ಯಕ್ರಮದ ಕುರಿತಾಗಿ ಎಲ್ಲಾ ಮಾಹಿತಿಗಳನ್ನು ನೀಡಿದ್ದೆ. ಆದರೆ ಈಗ ಒಸಾಮಾ ಪ್ರಶಾಂತ್ ಕಿಶೋರ್ಗೆ ಈ ಕಾರ್ಯಕ್ರಮದ ಮೂಲವನ್ನು ನಕಲು ಮಾಡಿ ನೀಡಿದ್ದಾನೆ. ಹಾಗಾಗಿ ಆತನ ವಿರುದ್ಧವೂ ಎಫ್ಐಆರ್ ದಾಖಲು ಮಾಡಲಾಗಿದೆ" ಎಂದು ಹೇಳಿದ್ದಾರೆ.
ಶಾಶ್ವತ್ ಗೌತಮ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಮೆರಿಕಾದಲ್ಲಿ ವ್ಯಾಸಂಗ ಮಾಡಿ ಬಿಹಾರಕ್ಕೆ ಹಿಂದಿರುಗಿದ್ದಾರೆ. 2012ರಲ್ಲಿ ಅಮೆರಿಕಾದಲ್ಲಿಯೂ ವಿದ್ಯಾರ್ಥಿಗಳ ಚುನಾವಣೆಗೆ ಸ್ಪರ್ಧಿಸಿದ್ದು, ಆ ಸಂದರ್ಭದಲ್ಲಿಯೂ ಇದೇ ರೀತಿಯಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದ ಎಂಬುದನ್ನು ಸಾಬೀತು ಪಡಿಸುವ ಸಾಕ್ಷಿಗಳನ್ನೂ ಗೌತಮ್ ಪೊಲೀಸ್ ಠಾಣೆಗೆ ನೀಡಿದ್ದಾರೆ.
ಈ ಕುರಿತಾಗಿ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.