ನವದೆಹಲಿ, ಫೆ.27 (DaijiworldNews/PY) : ಈಶಾನ್ಯ ದೆಹಲಿಯ ಜಫರಾಬಾದ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ, ವಿರೋಧದ ನಿಯಂತ್ರಣಕ್ಕೆ ನಿಯೋಜನೆಗೊಂಡಿರುವ ಪೊಲೀಸರು ಹಾಗೂ ಅರೆಸೇನಾ ಪಡೆಗಳ ಫೋಟೋ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಡುವೆಯೇ ಭಾರತೀಯ ಸೇನೆಯು ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದು, ಪೊಲೀಸರು ಹಾಗೂ ಅರೆಸೇನಾ ಪಡೆಗಳು ಯುದ್ದ ಉಡುಗೆಗಳನ್ನು ತೊಡದಿರಲು ಮಾರ್ಗಸೂಚಿ ಸಿದ್ದಪಡಿಸಬೇಕು ಎಂದು ಕೋರಿದೆ.
ಪೊಲೀಸರು ಹಾಗೂ ಅರೆಸೇನಾ ಪಡೆಗಳು ಯುದ್ದ ಉಡುಗೆಗಳನ್ನು ಧರಿಸಿದರೆ, ಸೇನೆ ಹಾಗೂ ಪೊಲೀಸರ ನಡುವಿನ ವ್ಯತ್ಯಾಸವೇ ಗೊತ್ತಾಗದೇ ಜನರು ತಪ್ಪಾಗಿ ಭಾವಿಸಿಕೊಳ್ಳುವ ಸಾಧ್ಯತೆಯಿದೆ. ಸೇನೆ ಚಾರಿತ್ರ್ಯದ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾಷ್ಟ್ರೀಯ ಹಿತಾಸಕ್ತಿಗೆ ದಕ್ಕೆಯಾಗುತ್ತದೆ ಎಂದು ತಿಳಿಸಿದೆ.
ಈ ಹಿಂದೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಆಪ್ತಸಿಬ್ಬಂದಿಯ ಸಮವಸ್ತ್ರ ಬದಲು ಮಾಡಿದಾಗಲೂ ಸೇನೆ ಆಕ್ಷೇಪವ್ಯಕ್ತಪಡಿಸಿತ್ತು.
ಪೊಲೀಸರು ಹಾಗೂ ಅರೆಸೇನಾ ಪಡೆಗಳು ಕಾನೂನು ಸುವ್ಯವಸ್ಥೆ ಪಾಲನೆ ಮತ್ತು ಉಗ್ರರ ನಿಯಂತ್ರಣ ಅಥವಾ ಪ್ರಭಾವದಲ್ಲಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಇಳಿಯುವ ವೇಳೆ ಸೇನೆಯ ಯುದ್ಧ ಉಡುಗೆಗಳನ್ನು ತೊಡಬಾರದು. ಯುದ್ದ ಉಡುಗೆಗಳನ್ನು ಈ ಕಾರ್ಯಾಚರಣೆಗೆ ತೊಡುವ ಅಗತ್ಯವಿಲ್ಲ. ಯುದ್ಧ ಉಡುಗೆಗಳನ್ನು ಅರಣ್ಯ ಪ್ರದೇಶಗಳ ಕಾರ್ಯಾಚರಣೆಯಲ್ಲಿ ಮಾತ್ರ ಬಳಸಬೇಕು ಎಂದು ಸೇನೆ ತಿಳಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪೊಲೀಸರು ಹಾಗೂ ಅರೆಸೇನಾ ಪಡೆಗಳು, ದೇಶದ ಆಂತರಿಕ ಭದ್ರತೆ, ಪ್ರತಿಷ್ಠಿತರ ಬೆಂಗಾವಲು, ಪೊಲೀಸ್ ಕಾರ್ಯಾಚರಣೆಗೆ ಯುದ್ಧ ಉಡುಗೆ ತೊಡುತ್ತಿರುವುದರಿಂದ ಸೇನೆಯೇ ಈ ಕಾರ್ಯಗಳನ್ನು ಸ್ವತಃ ನಿರ್ವಹಿಸುತ್ತಿದೆ ಎಂದು ಭಾವಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ರಕ್ಷಣಾ ಇಲಾಖೆಯು ಗೃಹ ಇಲಾಖೆಗೂ ತನ್ನ ಅಭಿಪ್ರಾಯವನ್ನು ತಿಳಿಸಬೇಕು ಎಂದು ಸೇನೆ ಮನವಿ ಮಾಡಿದೆ.
ಗುಂಡುನಿರೋಧಕ ಕವಚಗಳನ್ನು ಪೊಲೀಸರು ಹಾಗೂ ಅರೆಸೇನಾ ಪಡೆಗಳು ಧರಿಸಿದರೂ ಅದೂ ಕೂಡ ಖಾಕಿ ಬಣ್ಣದ್ದಾಗಿರಬೇಕು ಎಂದು ಸೇನೆ ಒತ್ತಾಯಿಸಿದ್ದು, ಜೊತೆಗೆ ಮಾರುಕಟ್ಟೆಯಲ್ಲಿ ಯುದ್ಧ ಉಡುಗೆ ಮುಕ್ತವಾಗಿ ಮಾರಾಟವಾಗದಂತೆ ಮಾಡಲೂ ನೀತಿ ರೂಪಿಸಬೇಕು ಎಂದು ಸಲಹೆ ನೀಡಿದೆ.