ಶಿವಮೊಗ್ಗ, ಫೆ.27 (DaijiworldNews/PY) : "ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು. ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗೆ ಹಿಂದಿನಿಂದನೂ ದೊರೆಸ್ವಾಮಿ ಅವರು ಬೆಂಬಲ ನೀಡಿಕೊಂಡೇ ಬಂದಿದ್ದಾರೆ. ಸ್ವಾತಂತ್ರ ಹೋರಾಟಗಾರರು ಪಕ್ಷಾತೀತವಾಗಿರಬೇಕು" ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಹಿಂದಿನಿಂದಲೂ ದೊರೆಸ್ವಾಮಿ ಅವರು ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗೆ ಬೆಂಬಲ ನೀಡಿಕೊಂಡೇ ಬಂದಿದ್ದಾರೆ. ಅವರು ಒಂದು ಪಕ್ಷದ ಪರವಾಗಿ ಮಾತನಾಡಿದರೆ ಅವರ ಬಗ್ಗೆ ಗೌರವ ಹೇಗೆ ಉಳಿಯುತ್ತದೆ. ಸ್ವಾತಂತ್ರ ಹೋರಾಟಗಾರರು ಪಕ್ಷಾತೀತವಾಗಿರಬೇಕು" ಎಂದು ತಿಳಿಸಿದರು.
"ಕಾಂಗ್ರೆಸ್ಸಿಗರು ಯತ್ನಾಳ್ ಹೇಳಿಕೆ ವಿರೋಧಿಸಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಸಿದ್ದರಾಮಯ್ಯ ಅವರು ಪ್ರಧಾನಿಯವರನ್ನು ಕೊಲೆಗಡುಕ ಎಂದರು. ಆಗ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನು ಹೊರಗಡೆ ಹಾಕಬೇಕಿತ್ತು. ಯತ್ನಾಳ್ ವಿರುದ್ದ ಇಂಥಹ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡುತ್ತಾರಂತೆ" ಎಂದು ಹೇಳಿದರು.
"ವಿಧಾನಸೌಧದ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಹೇಗೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ನಾನು ನೋಡುತ್ತೇನೆ. ವಿಧಾನಸೌಧ ಅವರ ಸ್ವಂತ ಆಸ್ತಿಯಲ್ಲ. ವಿಧಾನಸೌಧವಿರುವುದು ಕಾಂಗ್ರೆಸ್ಸಿಗರ ಬೇಳೆ ಬೇಯಿಸಿಕೊಳ್ಳಲು ಅಲ್ಲ ಎಂದು" ತಿಳಿಸಿದರು.
"ಪಾಕ್ ಪರ ಘೋಷಣೆ ಕೂಗಿದವರ ಬಗ್ಗೆ ಸಿದ್ದರಾಮಯ್ಯ ಅವರು ಖಂಡನಾ ಹೇಳಿಕೆ ನೀಡಿದರೆ ಅವರ ಕೆಲಸ ಮುಗಿಯಿತು. ಯತ್ನಾಳ್ ಅವರ ಹೇಳಿಕೆಗೆ ಧರಣಿ ಕೂರುತ್ತೀರಿ, ಪಾಕ್ ಪರ ಘೋಷಣೆ ಕೂಗಿದವರ ಬಗ್ಗೆ ಒಂದು ಖಂಡನಾ ಹೇಳಿಕೆ ನೀಡುತ್ತೀರಿ" ಎಂದು ಹೇಳಿದರು.
"ರಾಜ್ಯದಲ್ಲಿ ಕಾಂಗ್ರೆಸ್ನಲ್ಲಿ ಎಷ್ಟು ಜನರಿದ್ದಾರೋ ತಿಳಿದಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಇನ್ನೂ ನಿಮಗೆ ಆಗಿಲ್ಲ. ಯತ್ನಾಳ್ ಅವರ ವಿರುದ್ದ ಇಂಥ ಕಾಂಗ್ರಸ್ ಧರಣಿ ಕೂರುತ್ತದಂತೆ" ಎಂದರು.
"ಪಾಕ್ ಪರ ಘೋಷಣೆ ಕೂಗಿದವರ ವಿರುದ್ದ ದೊರೆಸ್ವಾಮಿ ಅವರು ಧರಣಿ ಕೂತಿದ್ದರೆ ನಾವೂ ಅವರಿಗೆ ಬೆಂಬಲ ನೀಡುತ್ತಿದ್ದೆವು. ಅಮೂಲ್ಯ ರಾಷ್ಟ್ರದ್ರೋಹಿ ಹೇಳಿಕೆ ನೀಡಿದ್ದಕ್ಕೆ ಪ್ರತಿಭಟನೆ ಮಾಡುತ್ತಿದ್ದೆವು. ಹಿರಿತನಕ್ಕೆ ತಕ್ಕಂತೆ ದೊರೆಸ್ವಾಮಿ ಅವರು ಮಾರ್ಗದರ್ಶ ನೀಡಿದರೆ ನಾವು ಅವರೊಂದಿಗೆ ಇರುತ್ತೇವೆ" ಎಂದು ತಿಳಿಸಿದರು.