ಬೆಂಗಳೂರು, ಫೆ.27 (DaijiworldNews/PY) : ಸ್ವಾತಂತ್ರ್ಯ ಹೋರಾಟಗಾರರೂ, ವೇದ ವಿದ್ವಾಂಸರು, ಶತಾಯುಷಿಗಳೂ ಆದ ಸುಧಾಕರ ಚತುರ್ವೇದಿ (127) ಗುರುವಾರ ಮುಂಜಾನೆ ನಿಧನರಾಗಿದ್ದಾರೆ.
ಇವರು ನಾಲ್ಕು ವೇದಗಳಿಗೂ ಭಾಷ್ಯ ಬರೆದು ಚತುರ್ವೇದಿಗಳೆನಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬಲಿದಾನ ಮಾಡಿದ ಸಾವಿರಾರು ಮಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಸುಧಾಕರ ಚತುರ್ವೇದಿ ಅವರು ಏಪ್ರಿಲ್ 20, 1897ರಲ್ಲಿ ಜನಿಸಿದ್ದಾರೆ. ತಂದೆ ತುಮಕೂರು ಮೂಲದವರಾಗಿದ್ದರೂ, ಇವರು ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ.
ಸುಧಾಕರ ಅವರು ಜಯನಗರದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ವಾಸವಿದ್ದರು. ರಾಜ್ಯದ ವಿವಿಧೆಡೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಆರ್ಯಮಿತ್ರ ಇವರ ದತ್ತು ಪುತ್ರ.
ಜಯನಗರದ ಕೃಷ್ಣಾಶ್ರಮದ ಎದುರಿಗೆ ಇವರ ಮನೆಯಿದ್ದು, ಅಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. 4 ಗಂಟೆಗೆ ಚಾಮಾರಾಜಪೇಟೆಯಲ್ಲಿನ ಚಿ೦ತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
1915ರಲ್ಲಿ ಹರಿದ್ವಾರ ಗುರುಕುಲಕ್ಕೆ ಸೇರಿ, ಅಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಆ ಸಂದರ್ಭ ಅವರಿಗೆ ಗಾಂಧೀಜಿ ಅವರ ಪರಿಚಯವಾಗುತ್ತದೆ. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು, 12 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ.
ಇವರು ಕನ್ನಡ, ಹಿಂದಿ ಸಂಸ್ಕೃತ, ಇಂಗ್ಲೀಷ್ ಭಾಷೆಗಳನ್ನು ಸೇರಿ ಸುಮಾರು 50 ಕೃತಿಗಳನ್ನು ರಚಿಸಿದ್ಧಾರೆ. ಇವರ ವೇದಗಳ ಬೃಹತ್ ಸಂಪುಟಗಳಲ್ಲಿ ಪ್ರಕಟಗೊಂಡಿದೆ.