ನವದೆಹಲಿ, ಫೆ.27 (DaijiworldNews/PY) : ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರುದ್ಧ ಪ್ರತಿಭಟನೆಯು ಈಗ ಕೋಮು ಹಿಂಸಾಚಾರಕ್ಕೆ ತಿರುಗಿದ್ದು ಈ ಹಿಂಸಾಚಾರದಿಂದ ಗುರುವಾರ ಮಧ್ಯಾಹ್ನದ ವೇಳೆಗೆ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿದೆ.
ಗುರುವಾರ ಬೆಳಗಿನ ಜಾವದಿಂದ ಯಾವುದೇ ಅಹಿತಕರ ಘಟನೆ ನಡೆದ ವಿಚಾರವಾಗಿ ವರದಿಯಾಗಿಲ್ಲ. ಸುಮಾರು 200ಕ್ಕೂ ಹೆಚ್ಚು ಮಂದಿ ಗಲಭೆಯಲ್ಲಿ ಸಿಲುಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಲಭೆಯಲ್ಲಿ ತೀವ್ರವಾಗಿ ಗಾಯಗೊಂಡವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೊಲೀಸರು ಹಾಗೂ ಅರೆಸೇನಾ ತುಕಡಿಗಳು ಬುಧವಾರ ರಾತ್ರಿಯಿಂದಲೇ ಗಲಭೆ ಪೀಡಿತ ಪ್ರದೇಶಗಳಲ್ಲಿ ಗಸ್ತು ತಿರುಗಿದ್ದು, ಸುರಕ್ಷತೆಗಾಗಿ ಅಲ್ಲಲ್ಲಿ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ, ಸೀಲಾಂಪುರ, ಚಾಂದ್ ಬಾಗ್, ಭಜನ್ಪುರ, ಖಜೂರಿಖಾಸ್ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.
ಪಾಲಿಕೆ ಸಿಬ್ಬಂದಿ ಗುರುವಾರ ಬೆಳಗಿನ ಜಾವ ಗಲಭೆ ಪೀಡಿತ ಪ್ರದೇಶಗಳ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಬೆಳಗಿನ ಜಾವ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲದ ಕಾರಣ ಜನರು ದಿನ ಬಳಕೆಯ ವಸ್ತುಗಳಿಗೆ ಪರದಾಡುವ ಸ್ಥಿತಿ ಎದುರಾಗಿದೆ.
ದೆಹಲಿಯ ಜಂಟಿ ಪೊಲೀಸ್ ಆಯುಕ್ತ ಒ ಪಿ ಮಿಶ್ರಾ ಗುರುವಾರ ಸಿಬ್ಬಂದಿಯೊಂದಿಗೆ ಭದ್ರತೆಪಡೆಯೊಂದಿಗೆ ಗಸ್ತು ನಡೆಸಿ, ನಾವೆಲ್ಲಾ ನಿಮ್ಮ ರಕ್ಷಣೆಗೆ ಇದ್ದೇವೆ. ದಿನನಿತ್ಯದ ವಸ್ತುಗಳ ಅಂಗಡಿ ತೆಗೆಯಬಹುದು. ಆದರೆ, ಯುವಕರು ಗುಂಪು ಸೇರಬೇಡಿ ಎಂದು ತಿಳಿಸಿದ್ದಾರೆ. ಪೊಲೀಸರು ಮನವಿ ಮಾಡುತ್ತಿದ್ದರೂ ಸಹ ಯಾರೂ ಹೊರಗಡೆ ಬರುತ್ತಿಲ್ಲ. ಬೆಳಗಿನ ಜಾವ ಅಲ್ಲಲ್ಲಿ ಜನರು ಮನೆಯ ಬಾಗಿಲುಗಳನ್ನು ತೆರದರೂ ಯಾರು ಹೊರಗಡೆ ಕಾಲಿಡುತ್ತಿಲ್ಲ. ಅಲ್ಲದೇ ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
ಪರಿಸ್ಥಿತಿ ಶಾಂತವಾಗಿದೆ. ಯಾವುದೇ ಅಹಿತಕರ ಘಟನೆ ರಾತ್ರಿಯಿಂದ ಸಂಭವಿಸಿಲ್ಲ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳವ ಮೊದಲು ಪ್ರಕರಣ ದಾಖಲಿಸಿಕೊಳ್ಳುವ ಕೆಲಸ ನಡೆಯುತ್ತದೆ. ಬಳಿಕ ಕಾನೂಕು ಕ್ರಮ ಕೈಗೊಳ್ಳಲಾಗುವುದು. ಗಲಭೆಯಲ್ಲಿ ಪಾಲ್ಗೊಂಡವರನ್ನು ಬಂಧಿಸಲಾಗುವುದು ಎಂದು ದೆಹಲಿಯ ಎಸ್ ಡಿಸಿಪಿ ಎಸ್.ಎನ್.ಶ್ರೀವಾಸ್ತವ ಹೇಳಿದ್ದಾರೆ.