ಬೆಂಗಳೂರು, ಫೆ 27 (Daijiworld News/MB) : "ಬಡವರಿಗೆ ಹೊರೆಯಾಗದ ರೀತಿ ಬಸ್ ಪ್ರಯಾಣ ದರ ಏರಿಸಿದ್ದೇವೆ. ಕುಮಾರಸ್ವಾಮಿ ಈ ಬಗ್ಗೆ ಮಾತನಾಡುವ ಮೊದಲು ಬಸ್ ದರ ಕುರಿತಾದ ಆದೇಶ ನೋಡಲಿ, ಬಳಿಕ ಮಾತನಾಡಲಿ" ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಬಸ್ ದರ ಏರಿಕೆ ಕುರಿತಾಗಿ ಎಚ್ಡಿಕೆ ಟೀಕೆ ಮಾಡುವ ಮೊದಲು ಬಸ್ ದರ ಕುರಿತು ಆದೇಶ ನೋಡಲಿ. 2014 ರಿಂದ ಈವರೆಗೂ ಬಸ್ ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಈಗ ನಿಗಮಗಳ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆ ಮಾಡಲಾಗಿದೆ. ಸಾರಿಗೆ ನಿಗಮಗಳು ತುಂಬಾ ಸಂಕಷ್ಟ ಎದುರಿಸುತ್ತಿದೆ. ಹಾಗಾಗಿ ಬಸ್ ದರ ಏರಿಕೆ ಮಾಡಿದ್ದೇವೆ" ಎಂದು ಸ್ಪಷ್ಟನೆ ನೀಡಿದ್ದಾರೆ.
"ಹಾಗೆಯೇ ನಿಗಮಗಳಲ್ಲಿ ಸೋರಿಕೆ ತಡೆಗಟ್ಟಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.
"ಬಿ.ಎಸ್.ಯಡಿಯೂರಪ್ಪ ಅವರೇ ಮೊದಲು ಮೂರೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸಿಎಂ ಪರ, ವಿರುದ್ಧ ಹೈಕಮಾಂಡ್ಗೆ ಪತ್ರ ನೀಡಿರುವ ವಿಚಾರ ಸುಳ್ಳು" ಎಂದು ಹೇಳಿದ್ದಾರೆ.