ನವದೆಹಲಿ, ಫೆ 27 (Daijiworld News/MB) : ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ವಿಚಾರದಲ್ಲಿ ಮೂಕ ಪ್ರೇಕ್ಷಕರಾಗಿ ವರ್ತಿಸುತ್ತಿವೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಗಲಭೆ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಗೃಹ ಸಚಿವ ಅಮಿತ್ ಶಾ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ನ ಹಲವು ನಾಯಕರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ಅವರನ್ನು ಗುರುವಾರ ಭೇಟಿ ಮಾಡಿದ್ದು ಆ ಮೂಲಕ ದೆಹಲಿಯಲ್ಲಿ ಶಾಂತಿ–ಸುವ್ಯವಸ್ಥೆ ಮರಳಿಸಲು ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಷ್ಟ್ರಪತಿಗಳ ಭೇಟಿ ನಂತರ ಮಾತನಾಡಿರುವ ಸೋನಿಯಾ ಗಾಂಧಿ, "ರಾಷ್ಟ್ರ ರಾಜಧಾನಿಯಲ್ಲಿ ಮತಿಹೀನ ಉನ್ಮಾದ, ವ್ಯವಸ್ಥಿತ ಹಿಂಸಾಚಾರ ಮತ್ತು ಸಂಘಟಿತ ಲೂಟಿಗಳು ವ್ಯಾಪಕವಾಗಿ ನಡೆಯುತ್ತಿವೆ. ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಆದರೆ ಅದು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿವೆ" ಎಂದು ಅವರು ಆಕ್ರೋಶ ಪಟ್ಟಿದ್ದಾರೆ.
ಇದೇ ವೇಳೆ ಮಾತನಾಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, "ದೆಹಲಿಯಲ್ಲಿ ನಡೆಯುತ್ತಿರುವುದು ರಾಷ್ಟ್ರೀಯ ಅವಮಾನ. ಈ ವಿಚಾರವನ್ನು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.