ರಾಮನಗರ, ಫೆ 27 (Daijiworld News/MB) : "ಬಿಜೆಪಿ ನಾಯಕರ ಪ್ರಚೋದನೆಯೇ ದೆಹಲಿ ಗಲಭೆಗೆ ಕಾರಣ" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಬಿಡದಿಯಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು "ಬಿಜೆಪಿಯವರು ಒಂದು ಕಡೆ ಟ್ರಂಪ್ರನ್ನು ಕರೆದುಕೊಂಡು ಬಂದು ಗುಜರಾತಿನಲ್ಲಿ ಮೆರವಣಿಗೆ ಮಾಡುತ್ತಾರೆ. ಮತ್ತೊಂದೆಡೆ ದೆಹಲಿಯಲ್ಲಿ ಗಲಭೆಯಾಗುತ್ತದೆ. ಅಧಿಕಾರಕ್ಕಾಗಿ ಇವರು ಅಮಾಯಕರನ್ನು ಬಲಿ ತೆಗೆದುಕೊಳ್ಳಲು ಮುಂದಾಗಿದ್ದಾರೆ" ಎಂದು ದೂರಿದರು.
"ಇದು ಹಿಂದೂ ರಾಷ್ಟ್ರವೇ ಆಗಿದೆ, ಬಿಜೆಪಿಯವರು ಹೊಸದಾಗಿ ಮಾಡಬೇಕಾಗಿಲ್ಲ. ಕಾಲಚಕ್ರ ಬದಲಾದಂತೆ ಜನರು ಎಲ್ಲರನ್ನೂ ಅರ್ಥಮಾಡಿಕೊಳ್ಳುತ್ತಾರೆ" ಎಂದರು.
ದೊರೆಸ್ವಾಮಿ ಬಗ್ಗೆ ಶಾಸಕ ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ "ಇವರು ದೊರೆಸ್ವಾಮಿ ಹೋರಾಡಿದಾಗ ಹುಟ್ಟಿದ್ದರೋ ಇಲ್ಲವೋ ತಿಳಿದಿಲ್ಲ. ಯಾವುದೋ ಆರ್ಎಸ್ಎಸ್ ಫಲಕ, ತಿಲಕ ಇಟ್ಟುಕೊಂಡು ಬಂದಿದೆ. ಆಟವಾಡುತ್ತದೆ, ಆಡಲಿ ಬನ್ನಿ" ಎಂದು ವ್ಯಂಗ್ಯ ಮಾಡಿದರು.
ಮಹಾರಾಷ್ಟ್ರಕ್ಕೆ ಸಚಿವ ನಾರಾಯಣ ಗೌಡ ಜೈಕಾರ ಹಾಕಿದ ಕುರಿತು ಮಾತನಾಡಿ "ಮಹಾರಾಷ್ಟ್ರದ ತಾಕತ್ತು ದೊಡ್ಡದಾಗಿದೆಯೇ, ಮಂಡ್ಯ ತಾಕತ್ತು ದೊಡ್ಡದಾಗಿದೆಯೇ ಎಂಬುದನ್ನು ಮುಂದೆ ಜನರೇ ನಿರ್ಧಾರ ಮಾಡುತ್ತಾರೆ" ಎಂದು ಹೇಳಿದರು.
ಜೆಡಿಎಸ್ ಶಾಸಕರ ಸಭೆಗೆ ಕೆಲವು ಶಾಸಕರು ಗೈರಾದ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯಿಸಿ, "ಯಾರೋ 3- 4 ಶಾಸಕರು ಪಕ್ಷದಿಂದ ಹೊರ ಹೋದ ಮಾತ್ರಕ್ಕೆ ಏನೂ ಆಗುವುದಿಲ್ಲ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ರಾಜಕಾರಣದಲ್ಲಿ ಸಾಮಾನ್ಯ. ಕಾಂಗ್ರೆಸ್ ಹಾಗೂ ಯಾವ ಕ್ಷೇತ್ರಗಳಲ್ಲಿ ಬಿಜೆಪಿಗಗೆ ಅದರ ಶಕ್ತಿ ಬೆಳೆಸಿಕೊಳ್ಳಲೂ ಸಾಧ್ಯವಾಗಲಿಲ್ಲವೋ ಅಲ್ಲಿ ನಮ್ಮ ಶಾಸಕರ ತಲೆ ಕೆಡಿಸಿ ಕರೆದುಕೊಂಡು ಪಕ್ಷ ಬೆಳೆಸಲು ಮುಂದಾಗಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಹೊಸ ನಾಯಕನನ್ನು ಹುಡುಕಿಕೊಳ್ಳುತ್ತಾರೆ" ಎಂದರು.
ದೆಹಲಿ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿ, "ದೆಹಲಿಯಲ್ಲಿ ಗಲಭೆ ನಡೆದು ಅಮಾಯಕರು ಬಲಿಯಾದರು. ಈ ಬಗ್ಗೆ ನ್ಯಾಯಾಧೀಶರು ಕೇಂದ್ರದ ವಿರುದ್ಧ ಪ್ರತಿಕ್ರಿಯೆ ನೀಡಿದ್ದರು. ಅದಕ್ಕಾಗಿ ಅವರನ್ನು ವರ್ಗಾವಣೆ ಮಾಡಿದ್ದಾರೆ" ಎಂದು ಆರೋಪಿಸಿದರು.