ನವದೆಹಲಿ, ಫೆ 27 (Daijiworld News/MB) : ದೆಹಲಿ ಹಿಂಸಾಚಾರದ ವೇಳೆ ದುಷ್ಕರ್ಮಿಗಳಿಂದ ಹತ್ಯೆಯಾದ ಗುಪ್ತಚರ ಇಲಾಖೆ ಸಿಬ್ಬಂದಿ ಅಂಕಿತ್ ಶರ್ಮ ಅವರ ಕುಟುಂಬ ಶರ್ಮ ಸಾವಿಗೆ ಮುಸ್ತಫಾಬಾದ್ ನ ನೆಹರೂ ವಿಹಾರ್ ಪ್ರದೇಶದ ಆಪ್ ಕಾರ್ಪೊರೇಟರ್ ಹಾಜಿ ತಾಹಿರ್ ಹುಸೈನ್ ಕಾರಣ ಎಂದು ಆರೋಪ ಮಾಡಿದೆ.
ಶರ್ಮ ಅವರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದ್ದು ಅವರ ಮೇಲೆ ದಾಳಿಗೈದು ಚರಂಡಿಗೆ ನೂಕಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೆಯೇ ಅವರ ದೇಹದಲ್ಲಿ ಗುಂಡೇಟಿನ ಗುರುತುಗಳಿವೆ ಎಂದು ಹೇಳಲಾಗಿದೆ.
ಶರ್ಮ ಖಜೂರಿ ಖಸ್ ಪ್ರದೇಶದ ನಿವಾಸಿಯಾಗಿದ್ದು ಅವರ ಮೃತದೇಹ ಚಾಂದ್ಬಾಗ್ನಲ್ಲಿ ಪತ್ತೆಯಾಗಿತ್ತು.
ಅಂಕಿತ್ ತಂದೆ ರವೀಂದರ್ ಶರ್ಮ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಪುತ್ರನ ಸಾವಿಗೆ ತಾಹಿರ್ ಹುಸೈನ್ ಅವರೇ ಕಾರಣ ಎಂದು ಆರೋಪ ಮಾಡಿದ್ದಾರೆ.
ತಾಹಿರ್ ಹುಸೈನ್ ಈ ಆರೋಪವನ್ನು ಅಲ್ಲಗಳೆದಿದ್ದು, ಈ ಆರೋಪ ಆಧಾರ ರಹಿತವಾದದ್ದು ಎಂದು ಹೇಳಿದ್ದಾರೆ.
ನನ್ನನ್ನು ಗುರಿ ಮಾಡುತ್ತಿರುವುದು ತಪ್ಪು. ನನಗೂ ಈ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಈ ಕುರಿತಾಗಿ ನಿಷ್ಪಕ್ಷಪಾತವಾಗಿ ತನಿಖೆಯಾಗಲಿ" ಎಂದು ತಿಳಿಸಿದ್ದಾರೆ.