ನವದೆಹಲಿ, ಫೆ 27 (DaijiworldNews/SM): ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ದೆಹಲಿ ಹಿಂಸಾಚಾರ ಇದೀಗ ತನ್ನಗಾಗಿದೆ. ಈ ನಡುವೆ ಸಂತ್ರಸ್ತರಿಗೆ ದೆಹಲಿ ಸರಕಾರ ಪರಿಹಾರ ಘೋಷಣೆ ಮಾಡಿದೆ. ಹಿಂಸಾಚಾರದಲ್ಲಿ ಸಂತ್ರಸ್ತರಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪರಿಹಾರ ಘೋಷಿಸಿದ್ದಾರೆ. ಈ ನಡುವೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಪ್ ನಾಯಕರು ತಪ್ಪು ಮಾಡಿದ್ದರೆ ಅವರಿಗೆ ಸೂಕ್ತ ಶಿಕ್ಷೆ ನೀಡುವಂತೆ ಸಿಎಂ ಆಗ್ರಹಿಸಿದ್ದಾರೆ.
ಹಿಂಸಾಚಾರದ ಬಳಿಕ ಇದೀಗ ದೆಹಲಿಯಲ್ಲಿ ಶಾಂತಿಯ ವಾತಾವರಣ ಮನೆ ಮಾಡತೊಡಗಿದೆ. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಹಿಂಸಾಚಾರದ ಸಂತ್ರಸ್ಥರಿಗೆ ಪರಿಹಾರ ಘೋಷಣೆ ಮಾಡಿದ್ದು, ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಹಾಗೂ ಗಂಭೀರ ಗಾಯಗೊಂಡವರಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ ತಲಾ 20 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಹಿಂಸಾಚಾರದಲ್ಲಿ ರಿಕ್ಷಾಗಳನ್ನು ಕಳೆದುಕೊಂಡವರಿಗೆ 25 ಸಾವಿರ ರೂ ಸಹಾಯಧನ ನೀಡಲಾಗುವುದು ಎಂದಿದ್ದಾರೆ. ಅಲ್ಲದೆ ಮನೆ ಮತ್ತು ಅಂಗಡಿಗಳನ್ನು ಕಳೆದುಕೊಂಡವರಿಗೆ ತಲಾ 5 ಲಕ್ಷ ರೂ ಪರಿಹಾರ ಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿಯೂ ಸರ್ಕಾರದ ಆರೋಗ್ಯ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಅಪಘಾತಗಳಿಗೆ ನೀಡಲಾಗುತ್ತಿದ್ದ ಯೋಜನೆಯಡಿಯಲ್ಲೇ ಹಿಂಸಾಚಾರ ಸಂತ್ರಸ್ಥರು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.