ಬೆಂಗಳೂರು, ಫೆ 27 (DaijiworldNews/SM): ರಾಜಕೀಯ ನಡೆಸುವ ಸಂದರ್ಭ ಖುರ್ಚಿಗಾಗಿ ಹಾವು ಮುಂಗಿಸಿಯಂತೆ ಬದ್ಧ ವೈರಿಗಳಾಗುವವರು ಮತ್ತೆ ಒಂದಾಗುತ್ತಾರೆ ಎಂಬುವುದು ಸತ್ಯ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ಇದೀಗ ಸಿಎಂ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಸಿಎಂ ಅವರ ಗುಣಮಾಡಿರುವ ವಿಚಾರ ಎಲ್ಲರನ್ನು ಅಚ್ಚರಿಯನ್ನಾಗಿಸಿದೆ.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೋರಾಟಗಾರರಾಗಿದ್ದು, ಹೋರಾಟದ ಹಾದಿಯಿಂದ ಬಂದವರಿಗೆ ಮಾತ್ರ ಜನರ ಬದುಕು ಅರ್ಥವಾಗುತ್ತದೆ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ನಗರದ ಅರಮನೆ ಆವರಣದಲ್ಲಿ ನಡೆದ ಯಡಿಯೂರಪ್ಪ ಹುಟ್ಟುಹಬ್ಬದ ಅಭಿನಂದನಾ ಸಮಾರಂಭದಲ್ಲಿ ಯಡಿಯೂರಪ್ಪ ಕುರಿತ ಕಾಫಿಟೇಬಲ್ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ರಾಜಕೀಯ ಹಾಗೂ ಮನುಷ್ಯ ಸಂಬಂಧಗಳು ಬೇರೆ ಬೇರೆಯೇ ಆಗಿದೆ. ನಾವು ಎಷ್ಟೇ ದೀರ್ಘಕಾಲ ರಾಜಕೀಯದಲ್ಲಿದ್ದರೂ, ಪರಸ್ಪರ ವಿರೋಧ ವ್ಯಕ್ತಮಾಡುತ್ತಿದ್ದರೂ ಮನುಷ್ಯ ಸಂಬಂಧಗಳಿಗೆ ಧಕ್ಕೆ ಬರಬಾರದು ಎಂದರು.
ಇನ್ನು ರಾಜಕೀಯ ಹಾಗೂ ಮನವ ಸಂಬಂಧಗಳ ಬಗ್ಗೆ ಮುಂದುವರೆಸಿದ ಅವರು, ನನ್ನ ಹಾಗೂ ಯಡಿಯೂರಪ್ಪನವರ ಸಿದ್ದಾಂತಗಳು ಬೇರೆ ಬೇರೆಯೇ ಆಗಿವೆ. ಅದು ಕೇವಲ ರಾಜಕೀಯ ಮಾತ್ರ. ನಾವು ನಮ್ಮ ಸಿದ್ದಾಂತಗಳನ್ನು ಜನತೆಯ ಮುಂದಿಡುತ್ತೇವೆ. ಆದರೆ, ಜನರು ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಜನತೆಗೆ ಇಷ್ಟವಾದ ಸಿದ್ಧಾಂತಗಳನ್ನು ಅವರು ಆಯ್ದುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ರಾಜಕೀಯ ಹಾಗೂ ವೈಯುಕ್ತಿಕ ಸಂಬಂಧಗಳಿಗೆ ಯಾವುದೇ ಧಕ್ಕೆ ಉಂಟಾಗಬಾರದು ಎಂದು ಅವರು ತಿಳಿಸಿದ್ದಾರೆ.