ನವದೆಹಲಿ, ಫೆ 28 (Daijiworld News/MB) : ಗುಪ್ತಚರ ವಿಭಾಗದ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆಗೆ ಸಂಬಂಧಿಸಿ ಎಎಪಿಯ ಕೌನ್ಸಿಲರ್ ತಾಹಿರ್ ಹುಸೇನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಎಎಪಿಯು ತಾಹಿರ್ ಹುಸೇನ್ನನ್ನು ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಗುರುವಾರ ರಾತ್ರಿ ಆದೇಶ ಹೊರಡಿಸಿದೆ.
ಈ ಹತ್ಯೆಯ ಹಿಂದೆ ತಾಹಿರ್ ಕೈವಾಡ ಇದೆ ಎಂದು ಅಂಕಿತ್ ಅವರ ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದರು. ಹಾಗೆಯೇ ತಾಹಿರ್ ಅವರ ಮಾಲೀಕತ್ವದ ಐದು ಅಂತಸ್ತಿನ ಕಟ್ಟಡದ ತಾರಸಿಯಿಂದ ಕಲ್ಲು ಮತ್ತು ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಗಿದೆ ಎಂದು ಸ್ಥಳೀಯರೂ ಹೇಳಿದ್ದಾರೆ.
ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರೂ ಕೂಡಾ ಈ ಹಿಂಸೆಯಲ್ಲಿ ತಾಹಿರ್ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಅಂಕಿತ್ ಶರ್ಮಾ ಅವರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದ್ದು ಅವರ ಮೇಲೆ ದಾಳಿಗೈದು ಚರಂಡಿಗೆ ನೂಕಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೆಯೇ ಅವರ ದೇಹದಲ್ಲಿ ಗುಂಡೇಟಿನ ಗುರುತುಗಳಿವೆ ಎಂದು ಹೇಳಲಾಗಿದೆ.
ತಾಹಿರ್ ಹುಸೈನ್ ಈ ಆರೋಪವನ್ನು ಅಲ್ಲಗಳೆದಿದ್ದು, ಈ ಆರೋಪ ಆಧಾರ ರಹಿತವಾದದ್ದು ಎಂದು ಹೇಳಿದ್ದಾರೆ.
ಈಗಾಗಲೇ ತಾಹಿರ್ ವಿರುದ್ಧ ಕೊಲೆ ಮತ್ತು ಗಲಭೆ ಪ್ರಕರಣ ದಾಖಲಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಎಎಪಿಯು ತಾಹಿರ್ ಹುಸೇನ್ನನ್ನು ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಗುರುವಾರ ರಾತ್ರಿ ಆದೇಶ ಹೊರಡಿಸಿದೆ.