ಬೆಂಗಳೂರು, ಫೆ 28 (Daijiworld News/MB) : ಅಂತರರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಷ.ಶೆಟ್ಟರ್ (85) ಶುಕ್ರವಾರ ನಸುಕಿನ 3 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು, ಉಸಿರಾಟಕ್ಕೆ ಸಮಸ್ಯೆಯಾಗಿದ್ದು ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಭೂಪಸಂದ್ರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ಬಗ್ಗೆ ಈವರೆಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕುಟುಂಬದ ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಹಾಗೆಯೇ ಹೊಸಕೋಟೆಯಲ್ಲಿ ಅವರಿಗೆ ಸೇರಿದ ಜಾಗ ಅಥವಾ ಚಾಮರಾಜಪೇಟೆಯ ಚಿತಾಗಾರದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಂತಿಮ ದರ್ಶನಕ್ಕೆ ಹೊಯ್ಸಳ ಶ್ರೀಕೃಷ್ಣ ಅಪಾರ್ಟ್ಮೆಂಟ್, ಕಲ್ಪನಾ ಚಾವ್ಲಾ ರಸ್ತೆ, ಭೂಪಸಂದ್ರ. ವ್ಯವಸ್ಥೆ ಮಾಡಲಾಗಿದೆ.
ಷ.ಶೆಟ್ಟರ್ ಅವರು 1935ರ ಡಿಸೆಂಬರ್ 11ರಂದು ಜನನವಾಗಿದ್ದು ಬಳ್ಳಾರಿ ಜಿಲ್ಲೆ ಹಂಪಸಾಗರದಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ಗಳಲ್ಲಿ ಉನ್ನತ ವ್ಯಾಸಂಗ ಪಡೆದಿದ್ದಾರೆ. ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆಯಾಗಿದೆ.
ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ಗಳ ಸರ್ವಾಧ್ಯಕ್ಷ ಸ್ಥಾನ, ಮೆಲ್ಬೋರ್ನ್ (ಆಸ್ಟ್ರೇಲಿಯಾ) ವಿಶ್ವ ಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನ, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಹಾಗೂ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತ್ವ ಪಡೆದಿದ್ದರು.
ಕುಂದಕುಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್, ಮಾಸ್ತಿ ಪ್ರಶಸ್ತಿ, ರನ್ನ ಪ್ರಶಸ್ತಿ, 2016ರ ಶಾಸ್ತ್ರೀಯ ಕನ್ನಡ ವಾಙ್ಮಯದ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ. ಸದ್ಯ ಬೆಂಗಳೂರಿನಲ್ಲಿ ಹಳಗನ್ನಡ ಮತ್ತು ವಚನ ಸಾಹಿತ್ಯದ ಓದು ಸಂಶೋಧನೆ ಮಾಡುತ್ತಿದ್ದರು
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು "ಹಿರಿಯ ಇತಿಹಾಸಕಾರ ಮತ್ತು, ಸಂಶೋಧಕ ಡಾ.ಎಸ್.ಶೆಟ್ಟರ್ ಅವರ ಸಾವಿನಿಂದ ಭಾರತೀಯ ವಿದ್ವತ್ ಲೋಕ ಬಡವಾಗಿದೆ. ಅವರು ಇನ್ನಷ್ಟು ಕಾಲ ಮಾರ್ಗದರ್ಶಕರಾಗಿ ನಮ್ಮ ಜೊತೆ ಇರಬೇಕಾಗಿತ್ತು.ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು, ಅವರ ಶೋಕದಲ್ಲಿ ನಾನೂ ಭಾಗಿ" ಎಂದು ಟ್ವೀಟ್ ಮಾಡಿದ್ದಾರೆ.