ನವದೆಹಲಿ, ಫೆ 28 (Daijiworld News/MB) : ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದಾಗಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಕಳೆದ ಭಾನುವಾರ ಸಂಜೆಯಿಂದ ಗುರುವಾರದವರೆಗೆ ಗಲಭೆಯಾಗಿರುವ ಈಶಾನ್ಯ ದೆಹಲಿಯಲ್ಲಿ ಶುಕ್ರವಾರ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಈಶಾನ್ಯ ದೆಹಲಿಯ ಚಾಂದ್ಬಾಗ್, ಶಿವಪುರಿ, ಮೌಜ್ಪುರ, ಜಾಫರಾಬಾದ್, ಭಜನ್ಪುರ್, ಗೋಕುಲ್ಪುರಿ, ಭಾಗೀರಥಿ ವಿಹಾರ್, ಬಾಬರ್ಪುರ, ಸೀಲಂಪುರ್, ಖಜೂರಿಖಾಸ್, ಶಿವ್ವಿಹಾರ್, ಮುಸ್ತಫಾಬಾದ್ ಮತ್ತಿತರ ಪ್ರದೇಶಗಳಲ್ಲಿ ಈಗಲೂ ಬೂದಿ ಮೆಚ್ಚಿದ ಕೆಂಡದಂತಹ ಸ್ಥಿತಿ ಇದೆ
ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದಲ್ಲಿ ಇವರೆಗೂ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೆಹಲಿ ಗಲಭೆ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಮೇಲ್ವಾಚರಣೆ ನಡೆಸುವಂತೆ ಆಗ್ರಹಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪತ್ರ ಬರೆದಿದ್ದಾರೆ.
ದೆಹಲಿಯ ಜಾಫರಾಬಾದ್ ಪ್ರದೇಶಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸದ್ಯದ ಪರಿಸ್ಥಿತಿ ಶಾಂತಿಯುತವಾಗಿದೆ. ಆದರೆ, ಉದ್ವಿಗ್ನತೆ ಇನ್ನು ಹಾಗೆಯೇ ಇದೆ" ಎಂದು ತಿಳಿಸಿದ್ದಾರೆ.
"ಅತ್ಯಾಚಾರ ಅಥವಾ ಕಿರುಕುಳದಂತಹ ಯಾವುದೇ ಪ್ರಕರಣಗಳು ದಾಖಲಾಗಿಲ್ಲ" ಎಂದು ಮಾಹಿತಿ ನೀಡಿದ್ದಾರೆ.