ನವದೆಹಲಿ, ಫೆ 28 (Daijiworld News/MB) : "ಕೇಂದ್ರ ಸರ್ಕಾರಕ್ಕೆ ರಾಜಧರ್ಮದ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪಾಠ ಮಾಡುವ ಅಗತ್ಯವಿಲ್ಲ" ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದ ಸೋನಿಯಾ ಗಾಂಧಿ, "ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜಧರ್ಮ ಪಾಲಿಸಬೇಕು. ಗೃಹ ಸಚಿವ ಅಮಿತ್ ಶಾ ತಕ್ಷಣವೇ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದ್ದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರವಿಶಂಕರ ಪ್ರಸಾದ್, "ಶ್ರೀಮತಿ ಸೋನಿಯಾ ಗಾಂಧಿ ಅವರೇ, ನೀವು ನಮಗೆ ರಾಜಧರ್ಮದ ಬಗ್ಗೆ ಉಪದೇಶ ನೀಡಬೇಡಿ" ಎಂದಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ದ್ವೇಷಪೂರಿತ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಮ್ಮ ಪಕ್ಷ ಕಪಿಲ್ ಮಿಶ್ರಾ ಆಡಿದ ಮಾತುಗಳನ್ನು ಎಂದಿಗೂ ಮನ್ನಿಸುವುದಿಲ್ಲ. ನಮ್ಮ ಪಕ್ಷದ ಹಿರಿಯ ನಾಯಕರೇ ಮಿಶ್ರಾ ಹೇಳಿಕೆಗಳನ್ನು ಸಾರ್ವಜನಿಕವಾಗಿ ಖಂಡಿನೆ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.