ನವದೆಹಲಿ, ಫೆ 28 (Daijiworld News/MB) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪರಕರಣದ ಅಪರಾಧಿ ಪವನ್ ಕುಮಾರ್ ಗುಪ್ತಾ ತನಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ.
ಮೂವರು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಕೋರ್ಟ್ ಈಗಾಗಲೇ ತಿರಸ್ಕರಿಸಿದ್ದು, ಮಾರ್ಚ್ 3ರಂದು ಅಪರಾಧಿಗಳಿಗೆ ಗಲ್ಲುಶಿಕ್ಷೆ ನಿಗದಿಯಾಗಿದೆ. ಈಗ ಪವನ್ ಕುಮಾರ್ ಗುಪ್ತಾ ತನಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಕ್ಯುರೇಟಿವ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಈಗಾಗಲೇ ಗಲ್ಲುಶಿಕ್ಷೆ ಎರಡು ಬಾರಿ ಮುಂದಕ್ಕೆ ಹೋಗಿದ್ದು ಈ ತಿಂಗಳ ಆರಂಭದಲ್ಲಿ ಪಟಿಯಾಲ ಹೌಸ್ ಕೋರ್ಟ್ ಹೊಸದಾಗಿ ಡೆತ್ ವಾರೆಂಟ್ ಹೊರಡಿಸಿದೆ.
ಕಳೆದ ಮಂಗಳವಾರ ನ್ಯಾಯಮೂರ್ತಿ ಆರ್. ಭಾನುಮತಿ, ಅಶೋಕ್ ಭೂಷಣ್ ಮತ್ತು ನವೀನ್ ಸಿನ್ಹಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು. ಎಲ್ಲ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಬೇಕೆಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ನಿರ್ಭಯಾ ಪಾಲಕರು ಕೂಡ ಇದನ್ನೇ ಪ್ರಶ್ನಿಸಿ ಅರ್ಜಿ ದಾಖಲಿಸಿದ್ದಾರೆ.
ಈ ಸಂಬಂಧ ಸುಪ್ರೀಂಕೋರ್ಟ್ ಮಾ.5 ರಂದು ವಿಚಾರಣೆ ನಡೆಸುವುದಾಗಿ ಹೇಳಿದ್ದು, ಈಗಾಗಲೇ ಮಾ.3 ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಹೊರಡಿಸಿರುವ ವಾರಂಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.