ನವದೆಹಲಿ, ಫೆ 28 (Daijiworld News/MB) : ಈಶಾನ್ಯ ದೆಹಲಿಯಲ್ಲಿ ಕರಾವಲ್ ನಗರದಲ್ಲಿ ಸೋಮವಾರ ರಾತ್ರಿ ಗುಂಪೊಂದು ಮನೆಗೆ ನುಗ್ಗಿ ತುಂಬು ಗರ್ಭಿಣಿಯ 30 ವರ್ಷದ ಶಬಾನಾ ಪರ್ವೀನ್ ಹೊಟ್ಟೆಗೆ ಒದ್ದಿದ್ದು ಬುಧವಾರ ಶಬಾನಾ ಮಗುವಿಗೆ ಜನ್ಮ ನೀಡಿದ್ದಾಳೆ. ಅದೃಷ್ಟವಷಾತ್ ತಾಯಿ ಹಾಗೂ ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ.
ಪರ್ವೀನ್ ಹಾಗೂ ಆಕೆಯ ಪತಿ ಮನೆಯಲ್ಲಿ ಮಲಗದ್ದಿ ಸಂದರ್ಭದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದಾಳಿ ಮಾಡಿ ಮನೆಗೆ ಬೆಂಕಿ ಹಚ್ಚಿದ್ದರು.
ಆ ಘಟನೆಯ ಕುರಿತು ಮಾತನಾಡಿದ ಪರ್ವೀನ್ ಅತ್ತೆ ನಸೀಮಾ, "ನಮ್ಮ ಧರ್ಮವನ್ನು ಅವರು ನಿಂದನೆ ಮಾಡಿದರು. ನನ್ನ ಪುತ್ರನಿಗೆ ಹೊಡೆದರು. ಇನ್ನೂ ಕೆಲವರು ನನ್ನ ಗರ್ಭಿಣಿ ಸೊಸೆಯ ಹೊಟ್ಟಯನ್ನೇ ತುಳಿದರು. ಆಕೆಯ ರಕ್ಷಣೆ ಮಾಡಲು ನಾವು ಮುಂದೆ ಬಂದಾಗ ನಮ್ಮ ಮೇಲೆ ಅವರು ದಾಳಿ ಮಾಡಿದರು. ಅಂದು ರಾತ್ರಿ ನಾವು ಬದುಕುವುದಿಲ್ಲ ಎಂದು ನಮಗೆ ಅನಿಸಿತ್ತು. ದೇವರ ದಯೆಯಿಂದ ದಾಳಿಕೋರರಿಂದ ನಾವು ತಪ್ಪಿಸಿಕೊಂಡಿದ್ದೇವೆ" ಎಂದು ಅವರು ಹೇಳಿದ್ದಾರೆ.
ಗರ್ಭಿಣಿ ಪರ್ವೀನ್ ಹೊಟ್ಟೆಗೆ ಅವರು ತುಳಿದಿದ್ದು ನಾವು ಆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದೆವು. ಅಲ್ಲಿನ ವೈದ್ಯರು ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಬುಧವಾರ ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ" ಎಂದು ತಿಳಿಸಿದ್ದಾರೆ.
ಇನ್ನೂ ತಮ್ಮ ಮನೆ ಸಂಪೂರ್ಣವಾಗಿ ಸುಟ್ಟು ಹೋದ ಬಗ್ಗೆ ದುಖಃ ವ್ಯಕ್ತ ಪಡಿಸಿದ ಅವರು, "ಇನ್ನೂ ನಮಗೆ ಅಲ್ಲಿ ಏನು ಉಳಿದಿಲ್ಲ. ನಾವು ನಮ್ಮ ಸಂಬಂಧಿಕರ ಮನೆಗೆ ಹೋಗಬೇಕಷ್ಟೆ" ಎಂದಿದ್ದಾರೆ.