ಬೆಂಗಳೂರು, ಫೆ 28 (DaijiworldNews/SM): ಮಾರ್ಚ್ ೫ರಂದು ಸಿಎಂ ಬಿಎಸ್ ಯಡಿಯೂರಪ್ಪನವರು ತಮ್ಮ ಸರಕಾರದ ಈ ಅವಧಿಯ ಬಜೆಟ್ ಮಂಡಿಸಲಿದ್ದಾರೆ. ರಾಜ್ಯ ಬಜೆಟ್ ಮೇಲೆ ಸಾಕಷ್ಟು ಆಶಾವಾದವಿದೆ. 30 ಜಿಲ್ಲೆಗಳಲ್ಲಿ ಬಜೆಟ್ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಗಳಿಂದ ನಿರೀಕ್ಷೆಗಳ ಮಹಾಪೂರವೇ ಇದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಜನತೆಯ ಲೆಕ್ಕಾಚಾರ ಹೆಚ್ಚುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ವಿಧಾನಸಭೆಯ ಸಂಖ್ಯಾಬಲ ಹೆಚ್ಚಿರುವುದರಿಂದ ಸಹಜವಾಗಿಯೇ ನಿರೀಕ್ಷೆಗಳನ್ನಿರಿಸಲಾಗಿದೆ. ಶಾಸಕನೊಬ್ಬನಿಗೆ ಒಂದು ಯೋಜನೆ ನೀಡಿದರೂ ಉಭಯ ಜಿಲ್ಲೆಗಳ ಹಲವು ಬೇಡಿಕೆಗಳು ಈಡೇರುವ ಸಾಧ್ಯತೆಗಳಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಿರೀಕ್ಷೆಗಳು:
ದಕ್ಷಿಣ ಕನ್ನಡ ಜಿಲ್ಲೆ ಎಷ್ಟೇ ವೇಗವಾಗಿ ಪ್ರಗತಿ ಪಥದತ್ತ ಮುಂದಡಿ ಇಡುತ್ತಿದ್ದರೂ, ಹತ್ತಾರು ಸಮಸ್ಯೆಗಳು ಜಿಲ್ಲೆಯಲ್ಲಿ ಜ್ವಲಂತವಾಗಿ ಉಳಿದುಕೊಂಡಿವೆ. ಪ್ರತಿ ಬಜೆಟ್ ಸಂದರ್ಭದಲ್ಲೂ ಪರಿಹಾರದ ನಿರೀಕ್ಷೆ ಇದ್ದರೂ ಕೂಡ ಈಡೇರುತ್ತಿಲ್ಲ.
ಮೆಟ್ರೋ ರೈಲು ಸಂಪರ್ಕ:
ದ.ಕ. ಜಿಲ್ಲೆಯಲ್ಲಿ ಪ್ರಮುಖವಾಗಿ ರಸ್ತೆ ಮಾರ್ಗವೇ ಪ್ರಮುಖ ಸಂಪರ್ಕ ಸಾಧನವಾಗಿದೆ. ನಗರದಿಂದ ವಿವಿಧ ಪ್ರದೇಶಗಳಿಗೆ ತೆರಳಲು ಕೆ ಎಸ್ ಆರ್ ಟಿಸಿ ಬಸ್ ಹಾಗೂ ರಿಕ್ಷಾ, ಟ್ಯಾಕ್ಸಿಗಳನ್ನೇ ಅವಲಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಕಡಲ ನಗರಿ ಮಂಗಳೂರಿನಿಂದ ಮೆಟ್ರೋ ರೈಲು ಆರಂಭಗೊಳ್ಳಬೇಕೆನ್ನುವುದು ಜನರ ಪ್ರಮುಖ ಬೇಡಿಕೆಯಾಗಿದೆ. ನಗರದಿಂದ ವಿವಿಧ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಆರಂಭಗೊಂಡಲ್ಲಿ ಟ್ರಾಫಿಕ್ ನ ಒಂದಿಷ್ಟು ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಎಂಬುವುದು ಜನಸಾಮಾನ್ಯರ ಲೆಕ್ಕಾಚಾರವಾಗಿದೆ.
ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರಿಗೆ ಪರಿಹಾರ:
ಮಂಗಳೂರು ಮಹಾನಗರದ ಜನತೆಗೆ ಕಡು ಬೇಸಿಗೆ ಸಂದರ್ಭದಲ್ಲೂ ಕುಡಿಯುವ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಹಲವು ರೈತರು ಫಲವತ್ತಾದ ಜಮೀನನ್ನು ಕಳೆದುಕೊಂಡಿದ್ದರು. ಅವರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಕೆಲವು ವರ್ಷಗಳಿಂದ ಆಗ್ರಹ ಕೇಳಿಬರುತ್ತಿವೆ. ಸಣ್ಣ ಪುಟ್ಟ ಹೋರಾಟಗಳನ್ನು ಕೂಡ ನಡೆಸಲಾಗಿದೆ. ಸಂಬಂಧಿಸಿದ ಇಲಾಖೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಆದರೆ, ಬರಪೂರ ಪರಿಹಾರ ಸಿಕ್ಕಿಲ್ಲ. ಇದೀಗ ಈ ಭಾಗದಲ್ಲಿ ಸ್ವತಃ ರೈತರಾಗಿದ್ದ ಜನನಾಯಕ ರಾಜೇಶ್ ನಾಯಕ್ ಶಾಸಕರಾಗಿರುವುದರಿಂದ ರೈತರ ನೋವಿಗೆ ಸ್ಪಂಧನೆ ಸಿಗಬಹುದೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ನಲ್ಲಿ ಇದಕ್ಕೆ ಹಣ ಮೀಸಲಿರಿಸಬಹುದೆಂಬ ಆಶಾವಾದ ವ್ಯಕ್ತವಾಗುತ್ತಿದೆ.
ಪಚ್ಚನಾಡಿ ತ್ಯಾಜ್ಯ ದುರಂತದಲ್ಲಿ ಸಂತ್ರಸ್ತರಾದ ಮುಂದಾರ ನಿವಾಸಿಗಳಿಗೆ ಪರಿಹಾರ:
ಇನ್ನು ಕಳೆದ ಮಳೆಗಾಲದಲ್ಲಿ ಮಂಗಳೂರು ನಗರ ಪ್ರದೇಶಕ್ಕೆ ತಾಗಿಕೊಂಡಿರುವ ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಕುಸಿತಗೊಂಡಿದ್ದು, ಇಲ್ಲಿಂದ ಸ್ಥಳಾಂತರಗೊಂಡಿರುವ ನಿವಾಸಿಗಳಿಗೆ ಪರಿಹಾರ ಸಿಗಬೇಕೆಂದು ಅಲ್ಲಿನ ನಿವಾಸಿಗಳು ಆಕಾಂಕ್ಷಿಗಳಾಗಿದ್ದಾರೆ.
ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ:
ಇನ್ನು ಮಂಗಳೂರು ನಗರದಲ್ಲಿರುವ ಪ್ರಮುಖ ಪ್ರದೇಶವಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎತ್ತರ ಪ್ರದೇಶದಲ್ಲಿದ್ದು, ಇಲ್ಲಿ ರನ್ ವೇ ವಿಸ್ತರಣೆ ಅಗತ್ಯವಿದೆ. ಆದರೆ, ಕಳೆದ ಹಲವು ವರ್ಷಗಳ ಬೇಡಿಕೆ ಇಲ್ಲಿಯ ತನಕ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಕರಾವಳಿಯಿಂದ ಆಡಳಿತ ಪಕ್ಷಕ್ಕೆ ಸೇರಿದ ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಈ ಬಾರಿ ರನ್ ವೇ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆಗಳು ನಡೆಯಲಿವೆ ಎಂಬ ಆಶಾವಾದ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯ ಪ್ರಮುಖ ಬೇಡಿಕೆಗಳು:
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ:
ಇನ್ನು ಉಡುಪಿ ಜಿಲ್ಲೆಯಲ್ಲಿ ಪ್ರಮುಖವಾಗಿರುವುದು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಬೇಕೆಂಬ ಆಗ್ರಹ ಕೇಳಿಬರುತ್ತಿವೆ. ಉಡುಪಿ ಜಿಲ್ಲೆಯಿಂದ ಏಳು ಮಂದಿ ಶಾಸಕರಾಗಿದ್ದು, ಈ ಪ್ರಮುಖ ಬೇಡಿಕೆ ಬಜೆಟ್ ಮೂಲಕ ಈಡೇರಲಿದೆ ಎಂದು ಜನರು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಪ್ರಮುಖ ಬೇಡಿಕೆಯಾಗಿರುವ ಜಿಲ್ಲಾಸ್ಪತ್ರೆ, ೨೫೦ ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆನ್ನುವ ಆಕಾಂಕ್ಷೆ ಜನರಲ್ಲಿದೆ. ಉಡುಪಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ಮತ್ಸ್ಯ ಸಂತತಿ ಉಳಿವಿಗೆ ಸಮಗ್ರ ಮೀನುಗಾರಿಕಾ ನೀತಿ ಕೂಡ ಈ ಸಲದ ಬಜೆಟ್ ನಲ್ಲಿ ಈಡೇರಲಿದೆ ಎಂದು ಹೇಳಲಾಗಿದೆ.
ಆದರೆ, ಉಭಯ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಎಲ್ಲಾ ನಿರೀಕ್ಷೆಗಳು ಈಡೇರುವುದು ಕನಸಿನ ಮಾತು. ಆದರೆ, ಆಧ್ಯತೆಯ ಮೇಲೆ ಪ್ರಮುಖ ಬೇಡಿಕೆಗಳು ಈಡೇರಲಿದೆ. ಆದರೆ, ಅದ್ಯಾವುವು ಎನ್ನುವುದಕ್ಕೆ ಬಜೆಟ್ ಮಂಡನೆಯ ವೇಳೆಯ ತೆರೆ ಬೀಳಲಿದೆ.