ಕಲಬುರ್ಗಿ, ಫೆ 28 (DaijiworldNews/SM): ರಾಜ್ಯದಲ್ಲಿ ಅನಗತ್ಯ ಇಲಾಖೆಗಳಿದ್ದು ಅವುಗಳನ್ನು ಪತ್ತೆ ಹಚ್ಚಿ ಅಗತ್ಯವೆನಿಸಿದ ಇಲಾಖೆಗಳೊಂದಿಗೆ ವಿಲೀನಗೊಳಿಸಲಾಗುವುದು. ಹಾಗೂ ಅನಗತ್ಯವಿರುವ ಇಲಾಖೆಗಳನ್ನು ರದ್ದುಗೊಳಿಸಲಾಗುವುದೆಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 100ಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಆದರೆ, ಸಿಬ್ಬಂದಿಗಳಿಗೆ ಬೇಕಾಗುವಷ್ಟು ಕೆಲಸ ಆ ಕಚೇರಿಯಲ್ಲಿ ಇಲ್ಲ.
ಅಂತಹವರನ್ನು ಗುರುತಿಸಿ ಇತರ ಅಗತ್ಯ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ನಿಯೋಜಿಸಲಾಗುವುದು ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ಪ್ರಸ್ತುತ ಒಟ್ಟು ಆದಾಯದಲ್ಲಿ ಶೇ 60ರಷ್ಟು ಸಿಬ್ಬಂದಿ ವೇತನದ ಖರ್ಚು ತಗಲುತ್ತಿದೆ. ಅನಗತ್ಯವಾಗಿ ಇಷ್ಟೊಂದು ಹಣ ಖರ್ಚು ಮಾಡುವ ಬದಲು ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಈಗಾಗಲೇ ಕೆಲವೊಂದು ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿದ್ದು ಇವುಗಳಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಾಣಕ್ಕೆಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಿ ಕಚೇರಿ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.