ಚಿತ್ರದುರ್ಗ, ಫೆ 29 (Daijiworld News/MB) : "ದೊರೆಸ್ವಾಮಿ ಆನೆ ಇದ್ದಂತೆ. ಆನೆ ನಡೆಯುವಾಗ ನಾಯಿ ಬೊಗಳಿದರೆ ಏನೂ ಆಗದು" ಎಂಬ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, "ಅವರು ಆನೆಯೊ, ಹಂದಿಯೊ ತಿಳಿಯದು" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶುಕ್ರವಾರ ಹೇಳಿದ್ದಾರೆ.
"ದೇಶಕ್ಕೆ ಸ್ವಾತಂತ್ರ್ಯ ದೊರೆತು 72 ವರ್ಷಗಳು ಕಳೆದಿವೆ. ಎಚ್.ಎಸ್.ದೊರೆಸ್ವಾಮಿ ಯಾವ ವಯಸ್ಸಿನಲ್ಲಿ ಹೋರಾಟ ಮಾಡಿದ್ದರು ಎಂಬುದು ಗೊತ್ತಿಲ್ಲ. ಸಾವರ್ಕರ್ ಅವರಷ್ಟು ಲಾಠಿ ಏಟನ್ನು ದೊರೆಸ್ವಾಮಿ ತಿಂದಿದ್ದಾರಾ?" ಎಂದು ಯತ್ನಾಳ ಪ್ರಶ್ನಿಸಿದ್ದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
"ದೊರೆಸ್ವಾಮಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವಾಗ ಎಚ್.ಡಿ.ಕುಮಾರಸ್ವಾಮಿ ಹುಟ್ಟಿರಲಿಲ್ಲ. ಕುಮಾರಸ್ವಾಮಿ ರಾಜಕೀಯಕ್ಕೆ ಏಕೆ ಬಂದರು ಹಾಗೂ ಸಾವಿರಾರು ಕೋಟಿ ರೂಪಾಯಿ ಹಣ ಹೇಗೆ ಸಂಪಾದಿಸಿದರು ಎಂಬುದು ಗೊತ್ತಿದೆ.ಕುಮಾರಸ್ವಾಮಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ" ಎಂದು ಆಕ್ರೋಶಗೊಂಡಿದ್ದಾರೆ.
ಪಾಕಿಸ್ತಾನಕ್ಕೆ ತೋಟಗಾರಿಕಾ ಸಚಿವ ನಾರಾಯಣಗೌಡ ಜೈಕಾರ ಹಾಕಿಲ್ಲ. ಅವರು ಮತ್ತೊಂದು ರಾಜ್ಯಕ್ಕೆ ಜೈಕಾರ ಹಾಕಿದ್ದಾರೆ. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಕನ್ನಡಪರ ಹೋರಾಟಗಾರರು ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ಮಾತನಾಡಲಿಲ್ಲ. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಎದ್ದಾಗ ಈ ಭೂ ಮಾಫಿಯಾ ಹೋರಾಟಗಾರರು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.
ಶಾಸಕ ರಮೇಶ ಕುಮಾರ್ ಅವರ ಇತಿಹಾಸ ಮತ್ತು ಭೂಕಬಳಿಕೆ ಬಗ್ಗೆ ನಮಗೂ ಗೊತ್ತಿದೆ. ಸಾಚಾ ಎಂಬಂತೆ ಮಾತನಾಡುವ ಬದಲು ತಮ್ಮಮನೆಯನ್ನು ಮೊದಲು ಶುಚಿಗೊಳಿಸಿಕೊಳ್ಳಲಿ. ಸತ್ಯಹರಿಶ್ಚಂದ್ರನ ಸಂತತಿಯವರಂತೆ ಮಾತನಾಡುವುದನ್ನು ಕಡಿಮೆ ಮಾಡಲಿ. ನನಗೆ ಆದರ್ಶ ಜೀವನದ ಪಾಠ ಅವರಿಂದ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
"ನನ್ನ ವಿರುದ್ಧ 23 ಪ್ರಕರಣಗಳಿವೆ. ನೀರಾವರಿ ಯೋಜನೆಗೆ ನಡೆದ ಹೋರಾಟ, ಪ್ರಧಾನಿ ನರೇಂದ್ರ ಮೋದಿ ಪರವಾಗಿ ಧ್ವನಿ ಎತ್ತಿದ ಪರಿಣಾಮವಾಗಿ ಈ ಪ್ರಕರಣಗಳು ದಾಖಲಾಗಿವೆ. ನನ್ನ ಮೇಲೆ ಅತ್ಯಾಚಾರ, ಭೂ ಕಬಳಿಕೆ ಹಾಗೂ ನಕಲಿ ನೋಟು ದಂಧೆಯ ಪ್ರಕರಣಗಳು ಇಲ್ಲ. ಕಾಂಗ್ರೆಸ್ ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದೆ ಮೊದಲು ಅವರು ಕ್ಷಮೆ ಕೇಳಲಿ. ಸದನಕ್ಕೆ ಬನ್ನಿ ನಾನೂ ಉತ್ತರ ಕೊಡುತ್ತೇನೆ" ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.