ಬೆಂಗಳೂರು, ಫೆ 29 (Daijiworld News/MB) : "ಕೇಂದ್ರ ಗೃಹ ಇಲಾಖೆ ದೆಹಲಿ ಹಿಂಸಾಚಾರ ಘಟನೆಯ ಹೊಣೆಯನ್ನು ಹೊರಬೇಕು" ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಜೆಪಿ ಭವನದಲ್ಲಿ ಮಾತನಾಡಿದ ಅವರು, "ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ದೇಶದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಆಗುತ್ತಿತ್ತು. ಬಿಜೆಪಿ ಹಾಗೂ ಅದರ ಬೆಂಬಲಿತ ಪಕ್ಷಗಳು ಬಿಟ್ಟು ಉಳಿದವರೆಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದರು" ಎಂದು ದೇವೇಗೌಡ ತಿಳಿಸಿದ್ದಾರೆ.
"ಈ ಕಾನೂನು ಜಾರಿ ಮಾಡಲು ಗೃಹ ಸಚಿವ ಅಮಿತ್ ಶಾ ಅವರು ಕಠಿಣ ತೀರ್ಮಾನ ಮಾಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಾಗ ಹೆಚ್ಚು ಹಿಂಸಾತ್ಮಕ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ದೆಹಲಿ ಘಟನೆಯಲ್ಲಿ ವಿಫಲವಾಗಿದೆ" ಎಂದು ಆರೋಪ ಮಾಡಿದರು.
"ಟ್ರಂಪ್ ಬಂದಾಗ ಆ ಕಡೆಗೆ ಗಮನ ಹರಿಸಿದ ಕೇಂದ್ರ ಈ ಕಡೆಗೆ ಗಮನವೇ ಕೊಡಲಿಲ್ಲ. ಹೀಗಾಗಿ ಈ ಘಟನೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯವಿದೆ" ಎಂದು ಆಪಾದಿಸಿದರು.
"ಈ ರೀತಿಯ ಘಟನೆಗಳು ಇಂದಿರಾ ಗಾಂಧಿಯವರ ಕಾಲದಲ್ಲಿ ನಡೆದಿದೆ. ಇದೀಗ ಮೋದಿ ಜನರಲ್ಲಿ ಮನವಿ ಮಾಡಿದ್ದು ದೆಹಲಿ ಸಹಜ ಸ್ಥಿತಿಗೆ ಮರಳುತ್ತಿದೆ" ಎಂದು ಹೇಳಿದ್ದಾರೆ.