ನವದೆಹಲಿ, ಫೆ 29 (Daijiworld News/MB): ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧವಾಗಿ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಲು ದೆಹಲಿ ಸರ್ಕಾರ ಪೊಲೀಸರಿಗೆ ಅನುಮತಿ ನೀಡಿದೆ.
ಇದು 2016ರಲ್ಲಿನ ಪ್ರಕರಣವಾಗಿದ್ದು ಜನವರಿ 14ರಂದು ಕುಮಾರ್ ಮತ್ತು ಇತರರ ವಿರುದ್ಧ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು. ಹಾಗೆಯೇ ಇದರಲ್ಲಿ ಎನ್ಯು ಮಾಜಿ ವಿದ್ಯಾರ್ಥಿಗಳಾದ ಉಮರ್ ಖಲಿದ್ ಮತ್ತು ಅನಿರ್ಭನ್ ಭಟ್ಟಾಚಾರ್ಯ ಸೇರಿದ್ದಾರೆ.
2016ರ ಫೆಬ್ರುವರಿ 9ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ಹಯ್ಯಾ ಕುಮಾರ್ ಮತ್ತು ಇತರರು ಮೆರವಣಿಗೆ ನಡೆಸಿದ್ದರು. ಈ ಸಂದರ್ಭದಲ್ಲಿ ದೇಶದ್ರೋಹದ ಘೋಷಣೆಗಳನ್ನು ಇವರು ಬೆಂಬಲಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನ್ಹಯ್ಯಾ ಕುಮಾರ್ ಅವರು, ಪ್ರಕರಣ ದಾಖಲು ಮಾಡಲು ಅನುಮತಿ ನೀಡಿದ ದೆಹಲಿ ಸರ್ಕಾರಕ್ಕೆ ಧನ್ಯವಾದಗಳು. ಗಂಭೀರವಾಗಿರುವ ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಇಲ್ಲವಾದರೆ ಟಿ.ವಿ ಮಾಧ್ಯಮಗಳು ತಮ್ಮ ನ್ಯಾಯಾಲಯದಲ್ಲಿ ತೀರ್ಪು ನೀಡುತ್ತವೆ ಎಂದು ವ್ಯಂಗ್ಯ ಮಾಡಿದ್ದಾರೆ.
ಕನ್ಹಯ್ಯಾ ಕುಮಾರ್ ಅವರು ಚರ್ಚೆಯ ಮುನ್ನೆಲೆಗೆ ಬಂದಿದ್ದ ದಿನಗಳಲ್ಲಿ, 2016ರಲ್ಲಿ ಟ್ವೀಟ್ವೊಂದನ್ನು ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, "ಕನ್ಹಯ್ಯಾ ಕುಮಾರ್ ಅವರ ಭಾಷಣವನ್ನು ನಾನು ಹಲವು ಬಾರಿ ಕೇಳಿದ್ದೇನೆ. ಸ್ಪಷ್ಟ ಚಿಂತನೆಯನ್ನು ಅವರು ಅದ್ಭುತವಾಗಿ ವ್ಯಕ್ತಪಡುತ್ತಾರೆ. ಜನ ಭಾವಿಸುವುದನ್ನೇ ಅವರು ಮಾತನಾಡುತ್ತಾರೆ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಟ್ವೀಟ್ ಮಾಡಿದ್ದರು.