ನವದೆಹಲಿ, ಫೆ 29(Daijiworld News/MB): ಕಳೆದ ವರ್ಷ ಫೆ.14ರಂದು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡವು ಇದೇ ಮೊದಲ ಬಾರಿಗೆ ಆರೋಪಿಯೊಬ್ಬನನ್ನು ಬಂಧಿಸಿದೆ.
ಪುಲ್ವಾಮಾದ ಸಮೀಪದ ಕಾಕಾಪೊರಾ ಎಂಬಲ್ಲಿನ ಹಜಿಬಲ್ ಪ್ರದೇಶದ ನಿವಾಸಿ, ಜೈಷ್ ಏ ಮೊಹಮದ್ ಸಂಘಟನೆಯೊಂದಿಗೆ ಸಕ್ರಿಯನಾಗಿದ್ದ ಶಾಖಿರ್ ಬಶೀರ್ ಮ್ಯಾಗ್ರೆ ಬಂಧಿತ ಆರರೋಪಿ.
ಈತ ಪುಲ್ವಾಮದಲ್ಲಿ ಪೀಠೋಪಕರಣ ಅಂಗಡಿ ನಡೆಸುತ್ತಿದ್ದು, ಆತ್ಮಾಹುತಿ ದಾಳಿಕೋರ ಆದಿಲ್ ಅಹಮದ್ ದರ್ಗೆ ಆಶ್ರಯ ನೀಡಿದ್ದ ಎಂದು ಹೇಳಲಾಗಿದೆ.
ಪಾಕಿಸ್ತಾನ ಮೂಲದ ಉಗ್ರ ಮೊಹಮದ್ ಉಮರ್ ಫಾರೂಖ್ ಎಂಬಾತ ಮೆಗ್ರೆಯನ್ನು ಆತ್ಮಾಹುತಿ ದಾಳಿಕೋರ ಆದಿಲ್ ದರ್ಗೆ 2018ರಲ್ಲಿ ಪರಿಚಯಿಸಿದ್ದ. ಆ ನಂತರ ಮೆಗ್ರೆ ಜೈಷ್ ಸಂಘಟನೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ
ಜೈಷ್ ಸಂಘಟನೆಗಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸುವ, ಹಣ ಹೊಂದಿಸುವುದು, ಸ್ಫೋಟಕ ವಸ್ತುಗಳನ್ನು ಪೂರೈಸುವ ಕೆಲಸಗಳನ್ನು ಈತ ಈ ವರೆಗೆ ಮಾಡಿದ್ದಾನೆ. ಅದಷ್ಟೇ ಅಲ್ಲದೆ, 2019ರ ಫೆ. 14ರಂದು ನಡೆದಿದ್ದ ಪುಲ್ವಾಮ ದಾಳಿಗೂ ಈತ ನೆರವಾಗಿದ್ದ, ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.