ನವದೆಹಲಿ, ಫೆ 29(Daijiworld News/MB): ಗುಜರಾತ್ ಕೋಮು ಗಲಭೆಯ ಸಂದರ್ಭದಲ್ಲಿ "ರಾಜಧರ್ಮ" ಪಾಲಿಸುವಂತೆ ಅಟಲ್ ಬಿಹಾರಿ ವಾಜಪೇಯಿ ನೀಡಿದ ಸಲಹೆಯನ್ನು ಕೇಳದವರು ನಮ್ಮ ಮಾತನ್ನು ಕೇಳುತ್ತೀರಾ? ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಗೆ ತಿರುಗೇಟು ನೀಡಿದೆ.
ದೆಹಲಿಯಲ್ಲಿ ಹಿಂಸಾಚಾರ ನಡೆದು 40ಕ್ಕೂ ಅಧಿಕ ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ರನ್ನು ಭೇಟಿಯಾಗಿದ್ದ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ, ಗೃಹ ಸಚಿವ ಅಮಿತ್ ಶಾರಿಂದ ರಾಜೀನಾಮೆ ಪಡೆಯಬೇಕು ಹಾಗೂ ರಾಜಧರ್ಮ ಪಾಲಿಸುವಂತೆ ಮೋದಿ ಸರಕಾರಕ್ಕೆ ತಾವು ಸೂಚನೆ ನೀಡಬೇಕೆಂದು ಕೇಳಿಕೊಂಡಿತ್ತು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು, "ಕಾಂಗ್ರೆಸ್ನವರು ನಮಗೆ ರಾಜಧರ್ಮವನ್ನು ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಂದ ರಾಜಧರ್ಮದ ಪಾಠ ಕಲಿಯುವ ಅಗತ್ಯ ನಮಗಿಲ್ಲ. ಸೋನಿಯಾ, ಪ್ರಿಯಾಂಕ, ರಾಹುಲ್ ಗಾಂಧಿಯವರು ಪ್ರಚೋಧನಾತ್ಮಕ ಹೇಳಿಕೆ ನೀಡಿ ದೆಹಲಿಯಲ್ಲಿ ಹಿಂಸಾಚಾರ ನಡೆಯಲು ಕಾರಣವಾಗಿದ್ದಾರೆ ಎಂದು ತಿರುಗೇಟು ನೀಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಸಾದ್ ಅವರು ದಯವಿಟ್ಟು ನಮಗೆ ರಾಜಧರ್ಮ ಕಲಿಸಬೇಡಿ, ಸಚಿವರಿಗೆ ರಾಜಧರ್ಮ ಕಲಿಸಲು ತಾವ್ಯಾರು? ಗುಜಾರಾತ್ನಲ್ಲಿ ರಾಜಧರ್ಮ ಪಾಲಿಸಿ ಎಂದು ವಾಜಪೇಯಿ ಹೇಳಿದ ಮಾತನ್ನೇ ಕೇಳದ ಅವರು ನಮ್ಮ ಮಾತನ್ನು ಕೇಳುತ್ತಾರೆಯೇ? ಆಲಿಸುವುದು, ಕಲಿಯುವುದು ಹಾಗೂ ರಾಜಧರ್ಮಕ್ಕೆ ಗೌರವ ನೀಡುವುದು ನಿಮ್ಮ ಸರ್ಕಾರದ ಅಂಶಗಳಲ್ಲೇ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಗೆಯೇ ಈ ಟ್ವೀಟ್ನಲ್ಲಿ 2002 ರಲ್ಲಿ ಗುಜಾರಾತ್ನಲ್ಲಿ ಕೋಮುಗಲಭೆ ನಡೆದ ಸಂದರ್ಭದಲ್ಲಿ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲಿಸುವಂತೆ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ.