ಬೆಂಗಳೂರು, ಫೆ.29 (DaijiworldNews/PY) : ಗೋವಿಂದರಾಜ ನಗರದ ಕಾರ್ಪೊರೇಷನ್ ಕಾಲೋನಿಯ ಆಯಷಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಧ್ವನಿವರ್ಧಕ ಬಳಸಲು ಪೊಲೀಸ್ ಇನ್ಸ್ಪೆಕ್ಟರ್ ನೀಡಿರುವ ಪರವಾನಗಿ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವಿಚಾರವಾಗಿ ಸ್ಪಷ್ಟನೆ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ವಕೀಲೆ ಸುಮಂಗಲಾ ಎ.ಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಫೆ.28 ಶುಕ್ರವಾರದಂದು ವಿಚಾರಣೆ ನಡೆಸಿ, ಈ ಪರವಾನಿಗೆ ಪೊಲೀಸ್ ಇನ್ಸ್ಪೆಕ್ಟರ್ ಯಾವ ಅಧಿಕಾರ ಬಳಸಿ ನೀಡಿದ್ದಾರೆ ಎಂಬ ವಿಚಾರವಾಗಿ ಸ್ಪಷ್ಟಪಡಿಸಿ ಎಂದು ತಾಕೀತು ಮಾಡಿದೆ.
ವಿಜಯನಗರ ಠಾಣೆಯ ಇನ್ಸ್ಪೆಕ್ಟರ್ 2015ರ ಮಾ.26ರಂದು ಮಸೀದಿಯ ಆಡಳಿತ ಮಂಡಳಿಗೆ ಸರ್ಕಾರದ ಪರ ವಕೀಲರು ಧ್ವನಿವರ್ಧಕ ಬಳಸಲು ನೀಡಿರುವ ಅನುಮತಿ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಈ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಶಬ್ದ ಮಾಲಿನ್ಯ ನಿಯಂತ್ರಣ ಅಧಿನಿಯಮ-2000ರ ಅನ್ವಯ ಉಪ ಪೊಲೀಸ್ ಆಯುಕ್ತರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ಧ್ವನಿವರ್ಧಕ ಬಳಕೆಗೆ ಪರವಾನಿಗೆ ನೀಡಬಹುದು. ಆದರೆ, ಪೊಲೀಸ್ ಇನ್ಸ್ಪೆಕ್ಟರ್ ಈ ಪ್ರಕರಣದಲ್ಲಿ ಪರವಾನಿಗೆ ನೀಡಿದ್ದಾರೆ. ಆದರೆ, ನಿಗದಿತ ಅವಧಿಗೆ ಎಂಬುದನ್ನು ನಮೂದಿಸಿಲ್ಲ ಎಂದು ತಿಳಿಸಿದರು.
ಒಬ್ಬ ಅಧಿಕಾರಿಯನ್ನು ಮಸೀದಿಯಲ್ಲಿ ಬಳಸಲಾಗುತ್ತಿರುವ ಧ್ವನಿವರ್ಧಕಗಳ ಶಬ್ದದ ಡೆಸಿಬಲ್ ಮಾಪನ ಮಾಡಿ ನ್ಯಾಯಾಲಯಕ್ಕೆ ವರದಿ ಕೊಡಲು ನೇಮಿಸುವಂತೆ ನ್ಯಾಯಪೀಠವು ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಿದ್ದು, ವಿಚಾರಣೆ ಮುಂದೂಡಿದೆ.