ಅಹಮದಾಬಾದ್, ಫೆ.29 (DaijiworldNews/PY) : ಎರಡು ಪಾರಿವಾಳಗಳು ವಿಮಾನದೊಳಗೆ ನುಗ್ಗಿ ಪ್ರಯಾಣಿಕರನ್ನು ಆತಂಕಗೊಳಿಸಿದ ಘಟನೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಅಹಮದಾಬಾದ್-ಜೈಪುರ ಮಾರ್ಗ ಸಂಚರಿಸುವ ಗೋ ಏರ್ ವಿಮಾನದಲ್ಲಿ ಪ್ರಯಾಣಿಕರು ಕುಳಿತಿದ್ದರು. ಈ ಸಂದರ್ಭ ಇದ್ದಕ್ಕಿದಂತೆ ಎರಡು ಪಾರಿವಾಳಗಳು ವಿಮಾನದೊಳಕ್ಕೆ ನುಗ್ಗಿ, ರೆಕ್ಕೆ ಬಡಿದುಕೊಂಡು ಪಟಪಟ ಸದ್ದು ಮಾಡುತ್ತಿದ್ದವು. ಈ ವೇಳೆ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ತಕ್ಷಣವೇ ಸಿಬ್ಬಂದಿಗಳು ಬಂದು ಪಾರಿವಾಳಗಳನ್ನು ಹೊರಹಾಕಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಎರಡು ಪಾರಿವಾಳಗಳು ತಾವಾಗಿಯೇ ವಿಮಾನದಿಂದ ಹೊರಕ್ಕೆ ಹೋದವು.
ಈ ಘಟನೆಯ ವಿಚಾರವಾಗಿ ಗೋ ಏರ್ ಸಂಸ್ಥೆ ಪ್ರಯಾಣಿಕರಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.