ಬಾಗಲಕೋಟೆ, ಫೆ 29(Daijiworld News/MB) : "ವೀರ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟದ್ದು ಬಿಟ್ಟರೆ ಈ ದರಿದ್ರ ಆರ್ಎಸ್ಎಸ್, ಸಂಘಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದ ಯಾವ ಹಿನ್ನೆಲೆಯೂ ಇಲ್ಲ, ದೊರೆಸ್ವಾಮಿ ಅವರನ್ನು ಕೇಳಲು ಇವರು ಯಾರು" ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಒಬ್ಬ ಜನಪ್ರತಿನಿಧಿಯಾದ ಬಸನಗೌಡ ಯತ್ನಾಳ ಅವರ ಉದ್ಧಟತನದ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಯತ್ನಾಳ್ನಂತೆ ಈ ರೀತಿ ನಾಲಿಗೆ ಹರಿಯಬಿಡುವವರು ತಕ್ಷಣ ತಮ್ಮ ಬಾಯಿ ಬಂದ್ ಮಾಡಬೇಕು" ಎಂದು ಹೇಳಿದರು.
ಅವರು ಮಾಧ್ಯಮದವರಲ್ಲಿ "ಈ ರೀತಿ ಬೇಜವಾಬ್ದಾರಿಯಾಗಿ ನಾಲಿಗೆ ಬಳಸಿ ನಾಚಿಕೆಗೇಡಿನ ಮಾತನಾಡುವವರ ಬಗ್ಗೆ ಸ್ವಲ್ಪವೂ ಅಣುಕಂಪ ಪಡುವುದು ಬೇಡ" ಎಂದು ಮನವಿ ಮಾಡಿದರು.
"ಬಸನಗೌಡ ಪಾಟೀಲ ಯತ್ನಾಳ ಅಂತಹವರು ಬಹುಬೇಗ ಜನರ ವಿಶ್ವಾಸ ಕಳೆದುಕೊಳ್ಳಲಿದ್ದಾರೆ" ಎಂದು ಅಭಿಪ್ರಾಯಪಟ್ಟರು.
"ದೇಶ ವಿಭಜನೆ ಹಾಗೂ 80ರ ದಶಕದ ಸಿಖ್ ಗಲಭೆಯ ಬಳಿಕ ದೆಹಲಿಯಲ್ಲಿ ಅತಿ ದೊಡ್ಡ ಗಲಭೆ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಾಚಿಕೆ, ಮಾನ–ಮರ್ಯಾದೆ ಇದ್ದಲ್ಲಿ ಈ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಕಿತ್ತು ಹಾಕಲಿ" ಎಂದು ಆಗ್ರಹಿಸಿದರು.
"ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನು ಕೇಂದ್ರ ಸರ್ಕಾರ ರಾತ್ರೋರಾತ್ರಿ ವರ್ಗಾವಣೆ ಮಾಡಿದ್ದನ್ನು ನೋಡಿದಾಗ 70ರ ದಶಕದ ಮಧ್ಯಭಾಗದ ತುರ್ತು ಪರಿಸ್ಥಿತಿ ಮತ್ತೆ ಜಾರಿಯಾಗಿರುವುದು ಕಾಣುತ್ತದೆ. ಹಾಗೆಯೇ ದೇಶದಲ್ಲಿ ಇದರ ವಿರುದ್ಧವಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ಆಗುವ ಎಲ್ಲ ಲಕ್ಷಣವೂ ಕಾಣುತ್ತಿದೆ" ಎಂದರು.