ಶಿವಮೊಗ್ಗ, ಫೆ 29(Daijiworld News/MB) : ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ರೈತರ ಸಾಲ ಮನ್ನಾವಿಲ್ಲ ಎಂದು ಹೇಳಿದ್ದು, ಈ ಕುರಿತು ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, "ಸುಳ್ಳು ಹೇಳುವುದರಲ್ಲಿ, ವದಂತಿ ಹಬ್ಬಿಸುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು" ಎಂದು ಕಿಡಿಕಾರಿದ್ದಾರೆ.
"ಅವರ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಂ. 1, ಅವರ ಮಾತಿಗೆ ಅಷ್ಟೊಂದು ಬೆಲೆ ಕೊಟ್ಟರೆ ಅವರ ರೀತಿ-ನೀತಿ, ನಡವಳಿಕೆನೇ ಬೇರೆ ಇರುತ್ತದೆ" ಎಂದರು.
"ಎಷ್ಟು ಜನರಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ಘೋಷಣೆ ಮಾಡಿದ ಯೋಜನೆಗಳು ತಲುಪಿದೆ? ಅವರು ಶಾಸನ ಸಭೆಯಲ್ಲಿ ಏನು ಮಾತನಾಡಿದರು, ಏನು ಉತ್ತರ ಕೊಟ್ಟರು? ಎಂಬುದು ಬಹುಶಃ ಯಾರಿಗೂ ಅರ್ಥ ಆಗಲಿಲ್ಲ, ನನಗೂ ಕೂಡ ಅರ್ಥವಾಗಲಿಲ್ಲ" ಎಂದು ಲೇವಡಿ ಮಾಡಿದರು.
"ಅವರ 14 ತಿಂಗಳ ಅಧಿಕಾರಾವಧಿಯಲ್ಲಿ ಎಷ್ಟು ರೈತರ ಸಾಲ ಮನ್ನಾ ಮಾಡಿದರು ? ಯಾವ ರೈತನಿಗೆ ಅದರ ಫಲ ದೊರಕಿತು? ಸಿ.ಎಂ ಯಡಿಯೂರಪ್ಪ ಯಾವ ರೈತನಿಗೂ ಅನ್ಯಾಯ ಆಗಲು ಬಿಡಲ್ಲ. ರೈತರ ತೊಂದರೆ ಇದ್ದರೆ ಅದರ ಸರಿಪಡಿಸುತ್ತೇವೆ" ಎಂದು ಹೇಳಿದ್ದಾರೆ.