ನವದೆಹಲಿ, ಫೆ.29 (DaijiworldNews/PY) : ನಗರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ಮನೆ ಮಠ ಕಳೆದುಕೊಂಡ ನಿರಾಶ್ರಿತರಿಗೆ ಆಶ್ರಯ ನೀಡಲು ಜವಹರ್ಲಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ಗೆ ಆಹ್ವಾನಿಸದಂತೆ ಜೆ.ಎನ್.ಯು. ಉಪ ಕುಲಪತಿ ಜಗದೀಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಶಾಂತಿ ಹಾಗೂ ಸೌಹಾರ್ಧತೆ ನೆಲೆಗೊಳ್ಳುವುದು ಅತೀ ಮುಖ್ಯವಾಗಿದೆ. ಹಿಂಸಾಚಾರದಲ್ಲಿ ಸಂತ್ರಸ್ತರಾದವರಿಗೆ ಎಲ್ಲಾ ರೀತಿಯ ಸಹಾಯಗಳನ್ನು ನೀಡುವುದು ಮಾನವೀಯತೆ ಆಗಿದೆ. ಆದರೆ ಕೆಲ ನಿರಾಶ್ರಿತರನ್ನು ನಮ್ಮ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಬಂದು ಇರುವಂತೆ ಆಹ್ವಾನಿಸಿದ್ದಾರೆ. ಜನವರಿಯಲ್ಲಿ ನಡೆದಿದ್ದ ಅಹಿತಕರ ಘಟನೆಗಳ ಸಮಯದಲ್ಲಿ ಹೊರಗಿನವರು ಕ್ಯಾಂಪಸ್ಗೆ ಬಂದಿದ್ದರು ಹಾಗೂ ಅಂದಿನ ಘಟನೆಗಳಿಗೆ ಅವರೇ ಕಾರಣ ಎಂದು ಆರೋಪ ಮಾಡಿದ್ದ ವಿದ್ಯಾರ್ಥಿಗಳೇ ಇವತ್ತು ಹೊರಗಿನವರನ್ನು ಕ್ಯಾಂಪಸ್ನಲ್ಲಿ ಬಂದು ಇರುವಂತೆ ಹೇಳುತ್ತಿದ್ದಾರೆ ಎಂದು ಜಗದೀಶ್ ಕುಮಾರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಗಲಭೆ ಸಂತ್ರಸ್ತರಿಗೆ ಮಾನವೀಯ ನೆರವು ನೀಡುವುದರಲ್ಲಿ ಯಾವುದೇ ಅಪರಾಧವಿಲ್ಲ ಆದರೆ, ಕ್ಯಾಂಪಸ್ನ ಭದ್ರತೆ ಹಾಗೂ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದ್ದಾರೆ.