ರಾಮನಗರ, ಫೆ.29 (DaijiworldNews/PY) : "ಈಗಿನಿಂದಲೇ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಿದ್ದತೆ ಮಾಡುತ್ತಿದ್ದೇನೆ. ಚುನಾವಣಾ ಚಾಣಕ್ಯರಾದ ಪ್ರಶಾಂತ್ ಕಿಶೋರ್ ಅವರ ಸಂಪರ್ಕದಲ್ಲಿದ್ದೇವೆ" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಐಎಎಸ್ ಅಧಿಕಾರಿ ಬದಲು ಮಂತ್ರಿ ಮನೆಯ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋರ್ಟ್ ಆದೇಶಗಳನ್ನು ಧಿಕ್ಕರಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದಲ್ಲಿ ಟಾರ್ಗೆಟ್ ಆಗಿದ್ದಾರೆ. ಆಡಳಿತ ನಡವಳಿಕೆ ವಿಚಾರವಾಗಿ ಸರ್ಕಾರದ ಗಮನಕ್ಕೂ ತಂದಿದ್ದೇನೆ" ಎಂದು ತಿಳಿಸಿದರು.
"ಕೇಂದ್ರ ಸರ್ಕಾರ ಮಹದಾಯಿ ವಿಚಾರದಲ್ಲಿ ಅಧಿಸೂಚನೆ ಹೊರಡಿಸಿದ್ದು, ಮುಂದಿನ ಕಾರ್ಯಗಳನ್ನು ಮಾಡಬೇಕಿದೆ. ನೀರಾವರಿ ಸಚಿವರ ಜೊತೆ ಮೇಕೆದಾಟು ಯೋಜನೆಯ ಬಗ್ಗೆ ಚರ್ಚೆ ನಡೆಸಿದ್ದೇನೆ. ಈ ವಿಚಾರವಾಗಿ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ. ಈ ಯೋಜನೆ ಇಂದಲ್ಲ, ನಾಳೆ ಆಗಲೇಬೇಕು" ಎಂದು ತಿಳಿಸಿದರು.