ಕಾರವಾರ, ಫೆ.29 (DaijiworldNews/PY) : "ನಿಗಮಗಳು ನಷ್ಟದಲ್ಲಿರಲು ಚಾಲಕರು, ನಿರ್ವಾಹಕರು ಕಾರಣವಲ್ಲ. ಅವರು ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ಎಲ್ಲೆಲ್ಲಿ ಹಣ ಸೋರಿಕೆಯಾಗುತ್ತಿದೆ ಎಂದು ಗೊತ್ತಿದೆ. ಅದನ್ನು ತಡೆದು ಮುಂದಿನ ಮೂರು ವರ್ಷಗಳಲ್ಲಿ ಲಾಭದಾಯಕವನ್ನಾಗಿ ಮಾಡಿ ತೋರಿಸುತ್ತೇವೆ" ಎಂದು ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಶನಿವಾರ ಹೊನ್ನಾವರದಲ್ಲಿ ಸರ್ಕಾರಿ ಬಸ್ ನಿಲ್ದಾಣದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, "ರಾಜ್ಯ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಲ್ಲಿ ಅಂದಾಜು 4 ಸಾವಿರ ಕೋಟಿಗಳಷ್ಟು ನಷ್ಟದಲ್ಲಿವೆ. ಇದರಿಂದಾಗಿ ನೌಕರರಿಗೆ ವೇತನ, ಬಸ್ಗಳ ಡೀಸೆಲ್ ಬಿಲ್ಗಳನ್ನು ಸರಿಯಾದ ಸಮಯಕ್ಕೆ ಪಾವತಿಸಲು ಸಾಧ್ಯವಾಗುತ್ತಿಲ್ಲ" ಎಂದು ತಿಳಿಸಿದರು.
"ಸುಮಾರು 4 ಸಾವಿರ ಹೊಸ ಬಸ್ಗಳು ಸಾರಿಗೆ ಇಲಾಖೆಗೆ ಬೇಕಾಗಿವೆ. 2,00 ಬಸ್ಗಳನ್ನು ಖರೀದಿ ಮಾಡಲಾಗಿದೆ. ಬ್ಯಾಟರಿ ಚಾಲಿತ ಬಸ್ಗಳಿಗೆ ಈ ಬಾರಿ ಆದ್ಯತೆ ಕೊಡಲಾಗುತ್ತದೆ. ವಿದೇಶಗಳ ಹಲವು ಕಂಪನಿಗಳು ಅವುಗಳ ಪೂರೈಕೆಗೆ ಮುಂದೆ ಬಂದಿವೆ" ಎಂದು ಹೇಳಿದರು.
"ಅವುಗಳ ನಿರ್ವಹಣೆಯು ಬಸ್ಗಳನ್ನು ಪೂರೈಸಿದ ಸಂಸ್ಥೆಗಳೇ ಮಾಡಲಿವೆ. ಇದರಿಂದ ಬರುವ ಆದಾಯದಿಂದ ಶೇ 60ರಷ್ಟನ್ನು ತಾವು ಪಡೆದುಕೊಂಡು, ಸರ್ಕಾರಕ್ಕೆ ಶೇ 40ರಷ್ಟನ್ನು ನೀಡಲು ಮುಂದಾಗಿವೆ. ಬ್ಯಾಟರಿ ಚಾರ್ಜ್ ಮಾಡಲು ಸ್ಥಳ ನೀಡುವಂತೆ ಮಾತ್ರ ಕೇಳಿವೆ. ಈ ಸಾಧ್ಯತೆಯ ವಿಚಾರವಾಗಿ ಅಧ್ಯಯನ ಮಾಡಲಾಗುತ್ತಿದೆ" ಎಂದು ತಿಳಿಸಿದರು.
"ಸರ್ಕಾರಿ ನೌಕರರನ್ನಾಗಿ ಸಾರಿಗೆ ನೌಕರರನ್ನು ಪರಿಗಣಿಸಬೇಕು ಎಂಬುದು ಬಹುದಿನಗಳ ಬೇಡಿಕೆ. ನಿಗಮಕ್ಕೆ ನಷ್ಟವಾದರೆ ಜೀವನಕ್ಕೆ ಭದ್ರತೆಯಿಲ್ಲ ಎಂಬ ಆತಂಕ ಅವರಿಗಿದೆ. ಮುಖ್ಯಮಂತ್ರಿ ಅವರು ಈ ಸಂಬಂಧ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ. ನಮ್ಮಲ್ಲಿ ಹಾಗೂ ಹೊರ ರಾಜ್ಯಗಳಲ್ಲ್ಲಿಎಷ್ಟು ಹಣಕಾಸಿನ ಹೊರೆಯಾಗುತ್ತದೆ ಎಂದು ಪರಿಶೀಲಿಸಬೇಕು. ಏನೇನು ಸೌಲಭ್ಯಗಳನ್ನು ಸರ್ಕಾರಿ ನೌಕರರಾದ ನಂತರ ಕೊಡಬೇಕು ಎಂಬ ವಿಚಾರದ ಬಗ್ಗೆ ಅವಲೋಕನ ಮಾಡಲು ತಿಳಿಸಿದ್ದಾರೆ. ಮುಖ್ಯಮಂತ್ರಿ ಜೊತೆ ವರದಿ ಬಂದ ಮೇಲೆ ಚರ್ಚೆ ನಡೆಸುತ್ತೇನೆ. ಮುಖ್ಯಮಂತ್ರಿ ಅವರು ಹೇಳಿದಂತೆ ಕ್ರಮ ತೆಗೆದುಕೊಳಲಾಗುವುದು" ಎಂದರು.
"ಸರಿಯಾದ ಸಮಯಕ್ಕೆ ಸಾರಿಗೆ ನೌಕರರಿಗೆ ಸಂಬಳ, ಭತ್ಯೆ, ಗ್ರಾಚ್ಯುಟಿ, ಪಿ.ಎಫ್ ಸಿಗುತ್ತಿಲ್ಲ. ಸುಮಾರು 3,000 ಕೋಟಿ ಸರ್ಕಾರದಿಂದ ಬರಬೇಕಿದೆ. ಅದನ್ನು ಆದಷ್ಟು ಬೇಗ ಪಡೆದುಕೊಂಡು ನೌಕರರ ವೇತನ ಮುಂತಾದವನ್ನು ಕೊಡಲು ಆದ್ಯತೆ ನೀಡಲಾಗಿದೆ. ಇದರೊಂದಿಗೆ ಹಣಕಾಸು ಸೋರಿಕೆಯೂ ಆಗುತ್ತಿದ್ದು, ಅದನ್ನು ತಡೆದು ಇಲಾಖೆಯನ್ನು ಲಾಭದಾಯಕ ಮಾಡಿದಾಗ ಮಾತ್ರ ಕಾರ್ಮಿಕರಿಗೆ ಸಮಾಧಾನವಾಗುತ್ತದೆ. ಈ ಸವಾಲನ್ನು ಸ್ವೀಕರಿಸಿದ್ದೇವೆ" ಎಂದರು.