ಬೆಂಗಳೂರು, ಫೆ.29 (DaijiworldNews/PY) : ಹಲವಾರು ಪ್ರತಿಭಟನೆ, ಹೋರಾಟಗಳಿಗೆ ಸಾಕ್ಷಿಯಾಗಿದ್ದ ಟೌನ್ಹಾಲ್ ಆವರಣದಲ್ಲಿ ಇನ್ನು ಮುಂದೆ ಯಾವುದೇ ರೀತಿಯಾದ ಪ್ರತಿಭಟನೆ, ಮುಷ್ಕರ ಹಾಗೂ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಬಾರದೆಂದು ಬಿಬಿಎಂಪಿ ತೀರ್ಮಾನಿಸಿದೆ.
ಶನಿವಾರ ನಗರದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಪುಟ್ಟಣ್ಣಚೆಟ್ಟಿ ಪುರಭವನವನ್ನು ಸಾರ್ವಜನಿಕರು ಸಭೆ-ಸಮಾರಂಭ ಅಥವಾ ಕಾರ್ಯಕ್ರಮ ನಡೆಸಲು ಮುಂಗಡವಾಗಿ ಹಣ ಪಾವತಿಸಿ ಕಾಯ್ದಿರಿಸಿರುತ್ತಾರೆ. ಹಲವಾರು ಸಂಘ-ಸಂಸ್ಥೆಗಳು ಅನುಮತಿ ಪಡೆದುಕೊಳ್ಳದೇ ಪ್ರತಿಭಟನೆ ನಡೆಸುವ ಕಾರಣ ಇಲ್ಲ ನಡೆಯುವ ಸಮಾರಂಭಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ಜನರು ಪುರಭವನವನ್ನು ಕಾಯ್ದಿರಿಸಲು ಯಾರು ಮುಂದೆ ಬರುತ್ತಿಲ್ಲ. ಈ ಕಾರಣದಿಂದ ಪಾಲಿಕೆಗೆ ಆರ್ಥಿಕ ನಷ್ಟವುಂಟಾಗುತ್ತಿದೆ ಎಂದು ಮೇಯರ್ ಗೌತಮ್ಕುಮಾರ್ ತಿಳಿಸಿದ್ದಾರೆ.
ವಾಹನಗಳ ದಟ್ಟಣೆಯೂ ಪುರಭವನದ ಸುತ್ತ-ಮುತ್ತ ಅಧಿಕವಾಗಿರುವುದರಿಂದ ಇಲ್ಲಿ ಪ್ರತಿಭಟನೆ ನಡೆಸುವುದರಿಂದಲೂಸಂಚಾರ ದಟ್ಟಣೆ ಅಧಿಕವಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಕಾರರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸುಮಾರು 5,000 ಜನ ಸೇರಿ ಧರಣಿ, ಮುಷ್ಕರ ಮಾಡುಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 560ಕ್ಕೂ ಅಧಿಕ ವಾಹನಗಳ ನಿಲುಗಡೆಗೆ ಅವಕಾಶ ಮಾಡಲಾಗುತ್ತದೆ. ಅಲ್ಲದೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ಮೇಯರ್ ಹೇಳಿದ್ದಾರೆ.
ಪ್ರತಿಭಟನಾಕಾರರ ಸಂಖ್ಯೆ ಕಡಿಮೆ ಇದ್ದರೆ ಮೌರ್ಯ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲದೇ ವಾಹನ ನಿಲುಗಡೆಗೂ ಅವಕಾಶ ಮಾಡಲಾಗುವುದು ಎಂದು ತಿಳಿಸಿದರು.