ಬೆಂಗಳೂರು, ಮಾ.01 (DaijiworldNews/PY) : ಪಾಕ್ ಪರ ಘೋಷಣೆ ಕೂಗಿದ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುದ್ರಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ 6ನೇ ಎಸಿಎಂಎಂ ಕೋರ್ಟ್ ಮಾ.2ಕ್ಕೆ ಮುಂದೂಡಿದೆ.
ಫೆ.29 ಶನಿವಾರ ವಿಚಾರಣೆ ಸಂದರ್ಭ ಸರ್ಕಾರಿ ಅಭಿಯೋಜಕರು, ಅಮೂಲ್ಯ ಹಾಗೂ ಅರುದ್ರಾ ಎರಡು ಪ್ರಕರಣಗಳು ಒಂದಕ್ಕೊಂದು ಸಂಬಂಧವಿದೆ. ಹೀಗಾಗಿ ತನಿಖಾ ವರದಿ ಮೇಲೆ ವಾದ ಮಂಡಿಸಲು ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರುದ್ರಾ ಪರ ವಕೀಲರು, ಸುಪ್ರೀಂಕೋರ್ಟ್ ಆದೇಶದಂತೆ ಒಂದು ವಾರದಲ್ಲಿ ಜಾಮೀನು ಅರ್ಜಿ ಇತ್ಯರ್ಥವಾಗಬೇಕು. ಹಾಗಾಗಿ ವಾದಕ್ಕೆ ಕಾಲಾವಕಾಶ ನೀಡದಂತೆ ಮಂಡಿಸಿದರು. ಇಬ್ಬರ ವಾದ-ಪ್ರತಿವಾದ ಆಲಿಸಿ ನ್ಯಾಯದೀಶರು, ಪ್ರಕರಣ ಮುಂದೂಡಿದ್ದಾರೆ.
ಈ ಹಿಂದೆಯೇ ಪಾಕ್ ಪರ ಘೋಷಣೆ ಆರೋಪ ಪ್ರಕರಣದ ಅರುದ್ರಾಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು. ನಗರದ 6ನೇ ಎಸಿಎಂಎ ನ್ಯಾಯಾಧೀಶ ಕೃಷ್ಣಮೂರ್ತಿ ಅವರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು. ಮಾ. 5ರವೆಗೂ ನ್ಯಾಯಾಂಗ ಬಂಧನದಲ್ಲಿರುವ ಅರುದ್ರಾಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಫೆ.21ನೇ ತಾರೀಕು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದ ಅಮೂಲ್ಯ ಲಿಯೋನಾ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಟೌನ್ ಹಾಲ್ ಬಳಿ ಹಿಂದೂಪರ ಸಂಘಟನೆಗಳು ಅಮೂಲ್ಯ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮತ್ತೋರ್ವ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗೆ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ಯುವತಿಯನ್ನು ಅರುದ್ರಾ ಎಂದು ಗುರುತಿಸಲಾಗಿತ್ತು.
ಇನ್ನು ಪಾಕ್ ಪರ ಘೋಷಣೆ ಕೂಗಿದ್ದಾಳೆ ಎನ್ನಲಾದ ಮತ್ತೋರ್ವ ಯುವತಿ ಅರುದ್ರಾ ವಿರುದ್ಧ ಎಸ್ಜೆ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.