ಕೋಲ್ಕತ, ಮಾ.01 (DaijiworldNews/PY) : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಗರಕ್ಕೆ ಭಾನುವಾರ ಆಗಮಿಸಲಿದ್ದು, ಈ ಸಂದರ್ಭ ಅವರ ವಿರುದ್ದ ಪ್ರತಿಭಟನೆಗಳು ಭುಗಲೇಳುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳ ಬಿಜೆಪಿ ಕೇಂದ್ರ ಕಚೇರಿ ಮುಂದೆ ರಾಜಕೀಯ ವಿರೋಧಿ ಪ್ರತಿಭಟನೆ ಯನ್ನು ಮುಸ್ಲಿಂಸಾಮಾಜಿಕ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಸಂಘಟನೆ ಹಮ್ಮಿಕೊಂಡಿದ್ದಾರೆ.
ಸಿಎಎ ಪರವಾಗಿ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಮಾತನಾಡಲಿದ್ದಾರೆ.
ಭಾರತದ ಪ್ರಮುಖ ಇಸ್ಲಾಮಿಕ್ ವಿದ್ವಾಂಸರ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲ್ಮಾ-ಎ-ಹಿಂದ್ ನಗರದಲ್ಲಿ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಚಿವ ಸಿದ್ದಿಕುಲ್ಲಾ ಚೌಧರಿ ಇದರ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ.
ನಗರದ ಬೀದಿಗಳಲ್ಲಿ ಎಡ ಪಕ್ಷಗಳು ಪ್ರತಿಭಟನೆ ನಡೆಸಲು ಕರೆ ನೀಡಿವೆ. ಪಶ್ಚಿಮ ಬಂಗಾಳ ಸಾಮಾಜಿಕ ಕಾರ್ಯಕರ್ತರ ಗುಂಪು ಪ್ರತ್ಯೇಕ ಪ್ರತಿಭಟನೆ ಆಯೋಜಿಸಿದ್ದು, ಬಿಜೆಪಿ ಹಮ್ಮಿಕೊಂಡಿರುವ ಸಭೆಯ ಸ್ಥಳದ ಸುತ್ತಮುತ್ತ ಈ ಎಲ್ಲ ಪ್ರತಿಭಟನೆ, ಧರಣಿಗಳು ಸಿಎಎ ಪರ ನಡೆಯಲಿವೆ.
ಈ ಹಿಂದೆ ನರೇಂದ್ರ ಮೋದಿಯವರನ್ನು ಕಪ್ಪು ಧ್ವಜಗಳೊಂದಿಗೆ ಸ್ವಾಗತಿಸಿದ ರೀತಿಯಲ್ಲಿಯೇ ಕೋಲ್ಕತ ಜನರು ಷಾ ಅವರನ್ನು ಸ್ವಾಗತಿಸಲಿದ್ದಾರೆ. ಬಂಗಾಳವು ಅವರನ್ನು ಒಳ್ಳೆಯ ರೀತಿಯಲ್ಲಿ ಸ್ವಾಗತಿಸಲು ಬಯಸುವುದಿಲ್ಲ ಎಂದು ಸಿಪಿಎಂ ಮುಖಂಡ ಮೊಹಮ್ಮದ್ ಸಲೀಂ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ವಾಲಿ ರೆಹಮಾನಿ ಅವರು ಮಾತನಾಡಿ, ರಾಮ್ಲೀಲಾ ಮೈದಾನದಿಂದ ಬಿಜೆಪಿ ಕಚೇರಿವರೆಗೆ ನಾವು ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ. ಶಾ ಅವರಿಗೆ ನೀಡಲು ಸಿಹಿ ತಿಂಡಿಗಳು, ಹೂಗಳು ಹಾಗೂ ಪತ್ರವನ್ನು ತೆಗೆದುಕೊಂಡು ಹೋಗಲಿದ್ದೇವೆ. ದ್ವೇಷದ ಭಾಷಣ ಮಾಡುವುದನ್ನು ನಿಲ್ಲಿಸಬೇಕೆಂದು ಆ ಮೂಲಕ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಜಮಿಯತ್ ಉಲ್ಮಾ-ಎ-ಹಿಂದ್ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಗ್ರಂಥಾಲಯ ಸಚಿವ ಸಿದ್ದಿಕುಲ್ಲಾ ಚೌಧರಿ ಅವರು ಮೌಲಾಲಿ ಪ್ರದೇಶದಿಂದ ಶಾಂತಿಯುತ ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚೌಧರಿ ಅವರು, ದೆಹಲಿಯಲ್ಲಿ ನಡೆದ ಗಲಭೆ ಸಂದರ್ಭ ಶಾ ಅವರ ನಿಷ್ಕ್ರಿಯತೆ ಖಂಡಿಸಿ ಅವರ ರಾಜೀನಾಮೆಗೆ ಒತ್ತಾಯಿಸಲಿದ್ದೇನೆ. ನಮ್ಮ ದೇಶಕ್ಕೆ ಅಮಿತ್ ಶಾ ಅವರಿಂದ ಕೆಟ್ಟ ಹೆಸರು ಬಂದಿದೆ ಎಂದು ಹೇಳಿದ್ದಾರೆ.
ತಮ್ಮ ವಿನಾಶಕಾರಿ ರಾಜಕಾರಣದಿಂದಾಗಿ ಎಡ ಹಾಗೂ ಕಾಂಗ್ರೆಸ್ ಪಕ್ಷಗಳು ಅಳಿವಿನ ಅಂಚಿನಲ್ಲಿವೆ. ಅದೇ ರೀತಿಯ ರಾಜಕೀಯವನ್ನು ಪುನರುಜ್ಜೀವನಕ್ಕಾಗಿ ಅವರು ಆಶ್ರಯಿಸುತ್ತಿದ್ದಾರೆ. ಜನರು ಅವರನ್ನು ತಿರಸ್ಕರಿಸುತ್ತಾರೆ ಎಂದು ಘೋಷ್ ಹೇಳಿದ್ದಾರೆ.
ಈ ಸಂದರ್ಭ ಪಶ್ಚಿಮ ಬಂಗಾಳ ಪೊಲೀಸರು ಕೋಲ್ಕತದಾದ್ಯಂತ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.