ನವದೆಹಲಿ, ಮಾ.01 (DaijiworldNews/PY) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಮತ್ತೊಮ್ಮೆ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.
ನಿರ್ಭಯಾ ಅಪರಾಧಿಗಳಿಗೆ ಮಾ.3ರಂದು ಗಲ್ಲು ಶಿಕ್ಷೆ ವಿಧಿಸಲು ಡೆತ್ ವಾರೆಂಟ್ ಜಾರಿ ಮಾಡಲಾಗಿತ್ತು. ತಿಹಾರ್ ಜೈಲಿನಲ್ಲಿರುವ 31 ವರ್ಷದ ಅಕ್ಷಯ್ ಕುಮಾರ್ ಸಿಂಗ್ ಫೆ.1ರಂದು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ರಾಷ್ಟ್ರಪತಿಗಳು ಫೆ.5ರಂದು ಅದನ್ನು ತಿರಸ್ಕರಿಸಿದ್ದರು. ಇದೀಗ ಅಕ್ಷಯ್ 2ನೇ ಬಾರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.
ಅಕ್ಷಯ್ ಕುಮಾರ್ ಸಿಂಗ್ ದೆಹಲಿ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದು ತನ್ನ ವಿರುದ್ದ ಹೊರಡಿಸಿರು ಡೆತ್ ವಾರೆಂಟ್ಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದ. ಹೀಗಾಗಿ ಮಾರ್ಚ್ 3ರಂದು ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ನಡೆಯುವುದು ಅನುಮಾನವಾಗಿದೆ.
ಮೊದಲ ಬಾರಿ ತಿರಸ್ಕಾರವಾಗಿರುವ ಕ್ಷಮಾದಾನ ಅರ್ಜಿಯಲ್ಲಿ ಎಲ್ಲಾ ಅಂಶಗಳನ್ನು ಉಲ್ಲೇಖಿಸಿಲ್ಲ ಎಂದು ಅಕ್ಷಯ್ 2ನೇ ಅರ್ಜಿಯಲ್ಲಿ ಹೇಳಿದ್ದಾನೆ. ಎಲ್ಲಾ ಅಪರಾಧಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಅಕ್ಷಯ್ ಎರಡನೇ ಬಾರಿ ಕ್ಷಮಾದಾನ ಕೋರಿದ್ದಾನೆ.
ಪವನ್ ಗುಪ್ತಾ ಸುಪ್ರೀಂಕೋರ್ಟ್ನಲ್ಲಿ ನನ್ನ ಕ್ಯುರೆಟೀವ್ ಅರ್ಜಿ ಬಾಕಿ ಇದೆ ಆದ್ದರಿಂದ ಡೆತ್ ವಾರೆಂಟ್ಗೆ ತಡೆ ನೀಡಬೇಕು ಎಂದು ಉಲ್ಲೇಖಿಸಿದ್ದಾರೆ. ಇನ್ನೊಬ್ಬ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ತನ್ನ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳ ಮುಂದೆ ಬಾಕಿ ಇದೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಜ.22ಕ್ಕೆ ಮೊದಲ ಡೆತ್ ವಾರೆಂಟ್ ಜಾರಿಯಾಗಿತ್ತು. ನಂತರ ಕಾನೂನು ಪ್ರಕ್ರಿಯೆಗಳ ಅಡ್ಡಿಯಿಂದ ಮೂಂದೂಡಲಾಯಿತು. ಫೆ.1ಕ್ಕೆ 2ನೇ ಡೆತ್ ವಾರೆಂಟ್ ಜಾರಿಯಾಗಿತ್ತು, ಅದನ್ನೂ ಮುಂದೂಡಲಾಗಿದ್ದು, ಇದೀಗ ಮಾರ್ಚ್ 3ಕ್ಕೆ ಮೂರನೇ ಡೆತ್ ವಾರೆಂಟ್ ಜಾರಿಯಾಗಿದೆ.