ಶಿಲ್ಲಾಂಗ್, ಮಾ.01 (DaijiworldNews/PY) : ಸಿಎಎ ಪರ-ವಿರೋಧಿ ಗುಂಪುಗಳ ನಡುವೆ ಮೇಘಾಲಯದ ಪೂರ್ವ ಖಾಶಿ ಪರ್ವತ ಪ್ರದೇಶದಲ್ಲಿ ಭುಗಿಲೆದ್ದ ಸಂಘರ್ಷದಲ್ಲಿ ಸುಮಾರು 10 ಜನ ಇರಿತಕ್ಕೊಳಗಾಗಿದ್ದು, ಇಬ್ಬರು ಹತ್ಯೆಯಾಗಿದ್ದಾರೆ.
ಫೆ.29 ಶನಿವಾರದಂದು ಭುಗಿಲೆದ್ದ ಹಿಂಸಾಚಾರ ಶಿಲ್ಲಾಂಗ್ನ ಹಲವು ಪ್ರದೇಶಗಳಲ್ಲಿ ಹರಡಿದ್ದು, ನಗರಾದಾದ್ಯಂತ ಬಿಗುವಿನ ವಾತಾರಣ ಮುಂದುವರೆದಿದೆ.
ಶಿಲ್ಲಾಂಗ್ನ ಜಯಾವ್, ಲಾಂಗ್ಸ್ನಿಂಗ್ ಮತ್ತು ಚಿರಾಪುಂಚಿ ಪಟ್ಟಣದ ಐವ್ ಸೊಹ್ರಾ ಮಾರುಕಟ್ಟೆಗಳಲ್ಲಿ ಘರ್ಷಣೆ ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಈ ಘರ್ಷಣೆಗಳಲ್ಲಿ ಗಾಯಗೊಂಡಿದ್ದಾರೆ.
ಬಾಂಗ್ಲಾದೇಶ ಗಡಿಯ ಸಮೀಪದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಇಚಮತಿ ಪ್ರದೇಶದಲ್ಲಿ ಖಾಸಿ ವಿದ್ಯಾರ್ಥಿ ಸಂಘಟನೆ ಸದಸ್ಯರು ಹಾಗೂ ಸ್ಥಳೀಯರಲ್ಲದವರ ನಡುವೆ ಘರ್ಷಣೆ ಸಂಭವಿಸಿದ ಪರಿಣಾಮ ಸ್ಥಳೀಯ ಟ್ಯಾಕ್ಸಿ ಚಾಲಕನೊಬ್ಬ ಹತ್ಯೆಯಾಗಿದ್ದಾನೆ.
ಘಟನೆಯ ಬಳಿಕ ಎಂಟು ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ಆರಂಭಿಸಲಾಗಿದೆ.
ಗಲಭೆ ಪೀಡಿತ ಶಿಲ್ಲಾಂಗ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಈಗಾಗಲೇ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮೇಘಾಲಯಕ್ಕೆ ಆಗಮಿಸಿದ್ದು, ಇನ್ನೂ ಆರು ತುಕಡಿಗಳು ಬರಲಿವೆ ಎಂದು ವರದಿಯಾಗಿದೆ.
ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ ಅವರು, ಹಿಂಸಾಚಾರದಿಂದ ಜನರು ದೂರವಿರಬೇಕು. ಸರ್ಕಾರ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.