ನವದೆಹಲಿ, ಮಾ.01 (DaijiworldNews/PY) : ಕಲ್ಲಿದ್ದಲು ಹೊತ್ತ 2 ಸರಕು ರೈಲುಗಳು ಭಾನುವಾರ ಮುಂಜಾನೆ ಮಧ್ಯಪ್ರದೇಶದ ಸಿಂಗ್ರೌಲಿ ಬಳಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಬೋಪಾಲ್ನಿಂದ 7 ಕಿ.ಮೀ. ದೂರದಲ್ಲಿರುವ ಘನ್ಹಾರಿ ಗ್ರಾಮದ ಸಮೀಪ ಖಾಲಿ ಸರಕು ರೈಲಿಗೆ ಮಧ್ಯಪ್ರದೇಶದ ಅಮ್ಲೋರಿ ಗಣಿಯಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಕಲ್ಲಿದ್ದಲು ತುಂಬಿದ ರೈಲು ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ ಎಂದು ಸಿಂಗ್ರೌಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶೆಂಡೆ ತಿಳಿಸಿದ್ದಾರೆ.
ಘರ್ಷಣೆಯ ಬಳಿಕ ಒಂದು ರೈಲಿನ ಹದಿಮೂರು ವ್ಯಾಗನ್ಗಳು ಹಾಗೂ ಎಂಜಿನ್ ಹಳಿ ತಪ್ಪಿ ಪಕ್ಕಕ್ಕೆ ಉರುಳಿದೆ.
ಈವರೆಗೆ ರೈಲು ಎಂಜಿನ್ನಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು ಇನ್ನೂ ಗುರುತಿಸಲಾಗಿಲ್ಲ.
ಸದ್ಯ, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ರೈಲು ಅಪಘಾತದಿಂದ ಈ ಮಾರ್ಗದಲ್ಲಿ ಸಾಗಬೇಕಿದ್ದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹಾಗಾಗಿ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.