ಹುಬ್ಬಳ್ಳಿ, ಮಾ.01 (DaijiworldNews/PY) : "ಕರ್ನಾಟಕದ ಆರ್ಥಿಕತೆಯ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸಿದೆ. ಹಾಗಾಗಿ ರಾಜ್ಯದ ಹಣಕಾಸು ಪರಿಸ್ಥಿತಿ ತೀರಾ ಹದಗೆಟ್ಟಿದೆ" ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಭಾನುವಾರ ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಇದುವರೆಗೆ ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ, ಜಿಎಸ್ಟಿ ಜಾರಿಯ ಪರಿಹಾರದ ಮೊತ್ತವೂ ದೊರೆತಿಲ್ಲ. ಸಿಗುತ್ತದೆ ಎಂಬ ಭರವಸೆಯೂ ಇಲ್ಲ" ಎಂದು ತಿಳಿಸಿದರು.
"ಅಂದಾಜು 1 ಲಕ್ಷ ಕೋಟಿಯಷ್ಟು ರಾಜ್ಯದಲ್ಲಿ ಸಂಭವಿಸಿದ ಭೀಕರ ನೆರೆಯಿಂದ ಹಾನಿಯಾಗಿದೆ. ಆದರೆ, ಕೇವಲ 1,600 ಕೋಟಿ ಪರಿಹಾರ ಮಾತ್ರ ಕೇಂದ್ರ ಸರ್ಕಾರ ನೀಡಿದ್ದು, ಇದರಿಂದ ಎಲ್ಲವನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಸೂರು ನೀಡಲು ಆಗುತ್ತಿಲ್ಲ" ಎಂದರು.
"ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾಗಿದೆ. ಈ ಸಮಯದಲ್ಲಿ ಸರ್ಕಾರಕ್ಕೆ ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲದಂತಹ ಪರಿಸ್ಥಿತಿಗೆ ತಲುಪಿದೆ. ಬಸ್ ಟಿಕೆಟ್ ದರ, ಹಾಲಿನ ದರ ಏರಿಕೆಯಿಂದಾಗಿ ಜನರು ತತ್ತರಿಸಿದ್ದಾರೆ. ಪ್ರಧಾನಿ ಮೋದಿ ಅವರು ಹೇಳಿರುವ ಅಚ್ಛೇ ದಿನ್ ಬಹುಶಃ ಇದೇ ಇರಬೇಕು" ಎಂದು ಹೇಳಿದರು.
"ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಧರ್ಮಾಧಾರಿತ ಕಾನೂನುಗಳನ್ನು ಜಾರಿಗೆ ತಂದು, ಜಾತಿ ಹಾಗೂ ಧರ್ಮಗಳ ಮಧ್ಯೆ ಸಂಘರ್ಷ ಸೃಷ್ಟಿಸುತ್ತಿದೆ. ಹೀಗಾಗಿ ದೇಶದಾದ್ಯಂತ ಗಲಭೆಗಳು ನಡೆಯುತ್ತಿವೆ" ಎಂದು ತಿಳಿಸಿದರು.
"ಕೇಂದ್ರ ಸರ್ಕಾರ ಎನ್ಆರ್ಸಿ, ಎನ್ಪಿಆರ್, ಸಿಎಎ ವಿರುದ್ದ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇದೇ ಕಾರಣಕ್ಕಾಗಿ ನಡೆದ ಗಲಭೆಗೆ 50ಕ್ಕೂ ಹೆಚ್ಚು ಮಂದಿ ಪ್ರಾಣ ತೆತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಗೃಹ ಸಚಿವ ಅಮಿತ್ ಶಾ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು" ಎಂದರು.
"ಬಿಜೆಪಿಯವರು ಧರ್ಮಗಳ ಮಧ್ಯೆ ಬೆಂಕಿ ಹಚ್ಚುವಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ನಡೆಯುತ್ತಿರುವ ಗಲಭೆಯಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಬಡವರ ಹೆಣಗಳ ರಾಶಿ ಮೇಲೆ ಅಧಿಕಾರ ನಡೆಸುತ್ತಿದೆ" ಎಂದು ಹೇಳಿದರು.
"ಸುಪ್ರೀಂಕೋರ್ಟ್ ಸೂಚನೆಗೆ ಮೇರೆಗೆ, ಮಹದಾಯಿ ತೀರ್ಪಿನ ಗೆಜೆಟ್ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಆದರೆ, ಇದು ತಮ್ಮ ಸಾಧನೆ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿಯೂ ಅವರಿಗೆ ಮಹದಾಯಿ ಕುರಿತು ಬದ್ಧತೆ ಇದ್ದಿದ್ದರೆ, 2018ರಲ್ಲೇ ಅಧಿಸೂಚನೆ ಹೊರಡಿಸಬೇಕಿತ್ತು" ಎಂದು ಹೇಳಿದರು.
"ಗಾಂಧಿ ಭಾವಚಿತ್ರಕ್ಕೆ ಪಿಸ್ತೂಲು ತೋರಿಸಿದವರು ಹಾಗೂ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರು ನಿಜವಾದ ದೇಶದ್ರೋಹಿಗಳು. ಆದರೆ, ಅಂತಹವರ ಬದಲಿಗೆ ಅಮಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗುತ್ತಿದೆ" ಎಂದರು.
ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ್ಕುಮಾರ್ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಶಾಕೀರ್ ಸನದಿ, ಸ್ವಾತಿ ಮಾಳಗಿ, ಮಹೇಂದ್ರ ಸಿಂಘಿ ಮುಂತಾದವರು ಇದ್ದರು.