ಬಳ್ಳಾರಿ, ಮಾ.01 (DaijiworldNews/PY) : "ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆಯನ್ನು ನೀಡಿ ಕುರಿಗಳಿಗೆ ತೋಳವನ್ನು ಕಾವಲು ಇಟ್ಟಂತಾಗಿದೆ" ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅರಣ್ಯ ಕಾಯ್ದೆ ಉಲ್ಲಂಘನೆಯಡಿ 8 ಪ್ರಕರಣಗಳು ಅರಣ್ಯ ಸಚಿವ ಆನಂದ್ ಸಿಂಗ್ ಅವರ ವಿರುದ್ದ ದಾಖಲಾಗಿದೆ. ಒಟ್ಟು 23,20,88,429 ರೂ.ವಷ್ಟು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ" ಎಂದು ಹೇಳಿದರು.
"ಆನಂದ್ಸಿಂಗ್ ಅವರು ಗಣಿಗಾರಿಕೆ ನಡೆಸುತ್ತಿದ್ದ ಸಂದರ್ಭ ಎಂಎಆರ್ಡಿ, ಐಪಿಸಿ, ಅರಣ್ಯ ಕಾಯ್ದೆ ಉಲ್ಲಂಘನೆಯಡಿ ಸಿಬಿಐ, ಲೋಕಾಯುಕ್ತದಲ್ಲಿ 8 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಕೂಡಾ ಸಲ್ಲಿಸಲಾಗಿದೆ" ಎಂದು ತಿಳಿಸಿದರು.
"ರಾಮಾಯಣ ಬರೆದಿರುವ ವಾಲ್ಮೀಕಿಯಂತೆ ಬದಲಾವಣೆಯಾಗಲು ನನಗೂ ಅವಕಾಶ ಕೊಡಿ ಎಂದು ಆನಂದ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ಕಳ್ಳನೂ ಅಲ್ಲ, ಸುಳ್ಳನೂ ಅಲ್ಲ, ಈ ವಿಚಾರವಾಗಿ ವಾಲ್ಮೀಕಿಯವರೇ ರಾಮಾಯಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಹಾಗಾಗಿ ಆನಂದ್ ಸಿಂಗ್ ಅವರ ಹೇಳಿಕೆ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ, ತಕ್ಷಣವೇ ಅವರು ಕ್ಷಮೆಯಾಚಿಸಬೇಕು" ಎಂದರು.
"ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ನೀಡಿದ ಹೇಳಿಕೆ ಸರಿಯಲ್ಲ. ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ವಿರುದ್ಧವೂ ಹಿಂದೆ ದೊರೆಸ್ವಾಮಿಯವರು ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಮಾತನಾಡಬಾರದು ಎಂಬ ಅಧಿನಿಯಮವೇ ಇದೆ. ಹಾಗಾಗಿ ಯತ್ನಾಳ್ ಅವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಬೇಕು" ಎಂದು ಹೇಳಿದರು.