ಬೆಂಗಳೂರು, ಮಾ 01 (DaijiworldNews/SM): ವಿಧಾನಮಂಡಲದ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಲ್ಲಿ ಸರಕಾರಕ್ಕೆ ಈ ಅಧಿವೇಶನ ಮಹತ್ವದ್ದಾಗಿದೆ. ಆದರೆ, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಹುನಾರ ನಡೆಸುತ್ತಿವೆ.
ರಾಜ್ಯಕ್ಕೆ ಎದುರಾಗಿರುವ ಆರ್ಥಿಕ ಸಂಕಷ್ಟ, ರೈತರ ಸಾಲ ಮನ್ನಾ ಸೇರಿದಂತೆ ಜನಪರ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಹೋರಾಟ ನಡೆಸಲಿವೆ. ಈ ಹಿಂದಿನ ಬಜೆಟ್ ನ ಕಾರ್ಯಕ್ರಮ ಅನುಷ್ಟಾನಕ್ಕೆ ಹಿಂದೇಟು, ರೈತರ ಸಾಲ ಮನ್ನಾ ಮಾಡಲು ನಿರ್ಲಕ್ಷ್ಯ, ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧದ ಹೇಳಿಕೆ ಇವುಗಳನ್ನೇ ಕಾಂಗ್ರೆಸ್ ಪ್ರಮುಖ ಅಸ್ತ್ರವಾಗಿ ಪ್ರಯೋಗಿಸಲು ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ ಎಂದು ತಿಳಿದುಬಂದಿದೆ.
ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಅದರಲ್ಲೂ ಪ್ರಮುಖವಾಗಿ ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನೊಂದಿಗೆ ಜೆಡಿಎಸ್ ಧ್ವನಿ ಗೂಡಿಸಿ ಹೋರಾಟ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ. ಇವುಗಳು ಮಾತ್ರವಲ್ಲದೆ ಆಡಳಿತದಲ್ಲಿರುವ ಬಿಜೆಪಿ ಸರಕಾರದ ಪ್ರಮುಖ ವೈಫಲ್ಯಗಳನ್ನು ಪಟ್ಟಿ ಮಾಡಿರುವ ಪ್ರತಿಪಕ್ಷ ಅವುಗಳನ್ನು ಗಂಭೀರವಾಗಿ ಚರ್ಚೆಗೆ ತೆಗೆದುಕೊಳ್ಳಲಿದೆ. ಬಜೆಟ್ ಅದಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಪ್ರತಿಪಕ್ಷಗಳ ನಿಲುವಾಗಿದೆ.