ಕೋಲ್ಕತ್ತ, ಮಾ. 02 (Daijiworld News/MB) : ಕೋಲ್ಕತ್ತದಲ್ಲಿಯೂ ಗೋಲಿ ಮಾರೋ (ಗುಂಡಿಕ್ಕಿ) ಎಂಬ ಘೋಷಣೆ ಕೇಳಿ ಬಂದಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಯಲ್ಲಿ ಭಾಗವಹಿಸಲು ಬಿಜೆಪಿ ಕಾರ್ಯಕರ್ತರು ಗೋಲಿ ಮಾರೋ ಘೋಷಣೆ ಕೂಗಿದ್ದಾರೆ.
ಕೋಲ್ಕತ್ತಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ಅಮಿತ್ ಶಾ
ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಗುಂಪಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಗಳ ಗುಂಪು ಎದುರಾಗಿದ್ದು ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಗೋಲಿ ಮಾರೋ ಎಂಬ ಘೋಷಣೆ ಕೂಗಿದ್ದಾರೆ.
ಈ ಘಟನೆ ಕೇಂದ್ರ ಕೋಲ್ಕತ್ತದ ಮೆಟ್ರೊ ನಿಲ್ದಾಣದ ಸಮೀಪ ಮಧ್ಯಾಹ್ನ ಸುಮಾರು ಎರಡು ಗಂಟೆಗೆ ನಡೆದಿದ್ದು ಘೋಷಣೆ ಕೇಳಿ ಬಂದಂತೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಗೋಲಿ ಮಾರೋ ಘೋಷಣೆ ಕೇಳಿ ಬಂದಂತೆ ಎರಡು ಗುಂಪುಗಳು ಪರಸ್ಪರರತ್ತ ನುಗ್ಗಲು ಯತ್ನಿಸಿದ್ದು ಆ ಕೂಡಲೇ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಆದರೆ ಈ ಘೋಷಣೆಯನ್ನು ತಮ್ಮ ಪಕ್ಷದ ಕಾರ್ಯಕರ್ತರು ಕೂಗಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ಎಡರಂಗ ಮತ್ತು ಕಾಂಗ್ರೆಸ್ ಪಕ್ಷವು ಬಿಜೆಪಿ ಮೆರವಣಿಗೆಯೊಳಗೆ ಸೇರಿಸಿದ್ದ ಜನರ ಗುಂಪು ಈ ಘೋಷಣೆ ಕೂಗಿದೆ ಎಂದು ಆರೋಪಿಸಿದ್ದಾರೆ.