ಮುಂಬೈ, ಮಾ 2 (Daijiworld News/MSP): ಮಹಾರಾಷ್ಟ್ರದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ. 5 ರಷ್ಟು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ಪ್ರಸ್ತಾವನೆಗೆ ವಿಶ್ವ ಹಿಂದೂ ಪರಿಷತ್ ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ, ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಶಿವಸೇನೆ ಹೇಳಿದೆ.
ಶಿವಸೇನಾಕ್ಕೆ ಹಿಂದುತ್ವ ಎಂಬುವುದು ಕೇವಲ ನಾಲಿಗೆ ಮೇಲೆ ಮಾತ್ರ ಇದೆ. ಮುಸ್ಲಿಮರಿಗೆ ಮೀಸಲಾತಿ ನೀಡುವುದು ಅಸಾಂವಿಧಾನಿಕ, ಸರ್ಕಾರವು ತನ್ನ ನಿರ್ಧಾರ ಜಾರಿಗೊಳಿಸಲು ಮುಂದಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಹೇಳಿತ್ತು.
ಮಾತ್ರವಲ್ಲದೆ 'ಮುಸ್ಲಿಮರಿಗೆ ಧರ್ಮ ಆಧಾರಿತ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ಆತಂಕಕಾರಿ. ಶಿವಸೇನೆ ನೇತೃತ್ವದ ಸರ್ಕಾರ ಮುಸ್ಲಿಮರ ಒಲೈಕೆ ಮಾಡಬಾರದು. ಇದು ಹಿಂದೂ ಸಮಾಜದ ನಿರೀಕ್ಷೆ' ಎಂದು ವಿಶ್ವ ಹಿಂದೂ ಪರಿಷತ್ ಟ್ವೀಟ್ ಮಾಡಿತ್ತು.
ವಿಶ್ವ ಹಿಂದೂ ಪರಿಷತ್ ತೀವ್ರ ವಿರೋಧದ ನಡುವೆ ಶಿವಸೇನೆ ಮೀಸಲಾತಿ ಪ್ರಸ್ತಾವನೆಯಲ್ಲಿ ತಳ್ಳಿಹಾಕಿದೆ.
ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಅಲ್ಪ ಸಂಖ್ಯಾತ ಸಚಿವ ನವಾಬ್ ಮಲಿಕ್ ಅವರು, ಶಿಕ್ಷಣದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಸಂಬಂಧ ಕಾನೂನು ಅಡೆತಡೆಗಳನ್ನು ನಿವಾರಿಸಿ ಮಸೂದೆ ಮಂಡಿಸಲಾಗುವುದು ಎಂದು ಹೇಳಿದ್ದರು.