ಮುಂಬೈ, ಮಾ. 02 (Daijiworld News/MB) : ಮಹಾರಾಷ್ಟ್ರದ ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಬೇಕೆಂದು ಬಿಜೆಪಿ ಶಿವಸೇನಾ ನೇತೃತ್ವದ ಸರ್ಕಾರಕ್ಕೆ ಆಗ್ರಹಿಸಿದೆ.
ಮಧ್ಯ ಮಹಾರಾಷ್ಟ್ರದ ಕೈಗಾರಿಕಾ ಕೇಂದ್ರವಾಗಿರುವ ಔರಂಗಾಬಾದ್ಗೆ 17ನೇ ಶತಮಾನದ ಮೊಘಲ್ ಚಕ್ರವರ್ತಿ ಔರಂಗಜೇಬ್ ಹೆಸರನ್ನು ನಾಮಕರಣ ಮಾಡಲಾಗಿದೆ.
ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಹೆಸರನ್ನು ಔರಂಗಾಬಾದ್ಗೆ ಇಡಬೇಕೆಂದು ಬಿಜೆಪಿ ಒತ್ತಾಯಿಸಿದ್ದು ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, "ನಾವು ಶಿವಾಜಿ ಮಹಾರಾಜ ಮತ್ತು ಅವರ ಮಗ ಸಂಭಾಜಿ ಮಹಾರಾಜರ ವಂಶಸ್ಥರು, ಔರಂಗಜೇಬನ ವಂಶಸ್ಥರಲ್ಲ. ಆ ಕಾರಣದಿಂದಾಗಿ ಔರಂಗಾಬಾದ್ ಅನ್ನು ಸಂಭಾಜಿನಗರವೆಂದು ಮರುನಾಮಕರಣ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, "ಆರ್ಎಸ್ಎಸ್ ಪ್ರಮುಖ ಎಂ.ಎಸ್.ಗೋಳ್ವಾಲ್ಕರ್ ಅವರು ಛತ್ರಪತಿ ಸಂಭಾಜಿಯನ್ನು ಅವಮಾನಿಸಿದ್ದು ಬಿಜೆಪಿ ಮೊದಲು ಗೋಳ್ವಾಲ್ಕರ್ ಬರವಣಿಗೆಯನ್ನು ಖಂಡನೆ ಮಾಡಲಿ" ಎಂದು ಹೇಳಿದೆ.