ನವದೆಹಲಿ, ಮಾ.02 (DaijiworldNews/PY) : ಈಶಾನ್ಯ ದೆಹಲಿಯಲ್ಲಿ 46 ಜನರು ಹಿಂಸಾಚಾರದಿಂದ ಮೃತಪಟ್ಟಿದ್ದು ಇದರ ಹಿಂದೆ ಬಿಜೆಪಿ ನಾಯಕರ ಹಾಗೂ ಪೊಲೀಸರ ಕೈವಾಡವಿದೆ ಎಂದು ಎಎಪಿ ಆರೋಪಿಸಿದೆ. ಸಂಸದೀಯ ಸಮಿತಿ ಹಾಗೂ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ಹಿಂಸಾಚಾರದ ಬಗ್ಗೆ ತನಿಖೆಯಾಗಬೇಕೆಂದು ಎಎಪಿ ಒತ್ತಾಯಿಸಿದೆ.
ಬಿಜೆಪಿ ನಾಯಕರನ್ನು ಹಾಗೂ ಪೊಲೀಸರನ್ನು ಹಿಂಸಾಚಾರಕ್ಕೆ ಸಂಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಎಎಪಿ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೇಳಿದ್ದಾರೆ.
ದೆಹಲಿ ಹಿಂಸಾಚಾರವು ಬಿಜೆಪಿಯ ವ್ಯವಸ್ಥಿತ ಪಿತೂರಿಯಿಂದ ನಡೆದಿದೆ. ಬಿಜೆಪಿ ನಾಯಕರು ಹಾಗೂ ಪೊಲೀಸರು ಇದರಲ್ಲಿ ಶಾಮೀಲಾಗಿದ್ದು, ಅವರನ್ನಉ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇದನ್ನು ನೇರ ಪ್ರಸಾರ ಮಾಡಬೇಕು. ಇಡೀ ದೇಶಕ್ಕೆ ಇದರಿಂದ ಸತ್ಯ ಏನೆಂದು ತಿಳಿಯುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಹೊರಗಿನವರನ್ನು ದೆಹಲಿಯಲ್ಲಿ ಗಲಭೆಗೆ ಪ್ರಚೋದನೆ ನೀಡಲು ಕರೆಸಲಾಗಿತ್ತು. ಹಾಗಾಗಿ ಈ ಗಲಭೆಗಳು ಬಿಜೆಪಿ ಕುಮ್ಮಕ್ಕಿನಿಂದಲೇ ನಡೆದಿವೆ ಎಂಬುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಈ ನಡುವೆ ಗಲಭೆಗಳಿಂದ ಕಳೆದೊಂದು ವಾರದಿಂದ ನಲುಗಿ ಹೋಗಿದ್ದ ದೆಹಲಿಯಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆಗ್ನೇಯ ಹಾಗೂ ಪಶ್ಚಿಮ ದೆಹಲಿಯಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸಿ ಜನರ ಆತಂಕಕ್ಕೆ ಕಾರಣವಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ.